

ಬೆಂಗಳೂರು: ಕರೊನಾ ತಂದ ಆರ್ಥಿಕ ಸಂಕಷ್ಟದಿಂದ ಹೊರಬರಲು ರಾಜ್ಯದ ಜನತೆ ಕಷ್ಟಪಡುತ್ತಿರುವ ಸಂದರ್ಭದಲ್ಲೇ ಗಾಯದ ಮೇಲೆ ಬರೆ ಎಂಬಂತೆ ಬೆಸ್ಕಾಂ ಮತ್ತೊಂದು ಹೊರೆ ಹೊರಿಸಿದೆ. ಲಾಕ್ಡೌನ್ನಿಂದಾಗಿ ಮೀಟರ್ ರೀಡಿಂಗ್ ನೋಡಿ ವಿದ್ಯುತ್ ಬಿಲ್ ಕೊಡಲು ಸಾಧ್ಯವಾಗದ ಕಾರಣಕ್ಕೆ ಬೆಸ್ಕಾಂ ಸರಾಸರಿ ವಿದ್ಯುತ್ ಯೂನಿಟ್ ಬಳಕೆ ಆಧಾರದಲ್ಲಿ ಗ್ರಾಹಕರಿಗೆ ಬಿಲ್ ನೀಡಿದೆ. ಬಿಲ್ನಲ್ಲಿ ಸರಾಸರಿ ಶೇ.30ರಿಂದ ಶೇ.60 ಹೆಚ್ಚುವರಿ ಮೊತ್ತ ಹಾಕಿರುವ ಪರಿಣಾಮ ಕಂಗಾಲಾಗಿರುವ ಗ್ರಾಹಕರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೀಟರ್ ನೋಡಿಯೇ ಮಾರ್ಚ್ನ ಬಿಲ್ ಅನ್ನು ಏಪ್ರಿಲ್ನಲ್ಲಿ ಹಾಕಲಾಗಿತ್ತು. ಬಿಲ್ ಕೊಡದಿದ್ದರೂ ಕಳೆದ ಬಿಲ್ನ ಸರಾಸರಿ ಲೆಕ್ಕಾಚಾರದಂತೆ ಪಾವತಿಸಲು ಗ್ರಾಹಕರಿಗೆ ಸೂಚಿಸಲಾಗಿತ್ತು. ಇದೀಗ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಬಳಸಿದ ಒಟ್ಟು ಯೂನಿಟ್ ಆಧರಿಸಿ (ಹಲವು ಸ್ಲಾಬ್ಗಳನ್ನು ಸೇರಿಸಿ) ಒಟ್ಟಿಗೆ ಬಿಲ್ ನೀಡಿದ್ದಾರೆ. ಸರಾಸರಿ ವಿದ್ಯುತ್ ಬಳಕೆ ಆಧಾರದಲ್ಲಿ ಲೆಕ್ಕ ಹಾಕಿದರೂ ಈ ಬಿಲ್ ಮೊತ್ತ ಜಾಸ್ತಿ ಎಂದು ಗ್ರಾಹಕರು ದೂರಿದ್ದಾರೆ.
ಏಪ್ರಿಲ್ನಲ್ಲಿ ಉಪಯೋಗಿಸಿದ ವಿದ್ಯುತ್ ಬಿಲ್ ಮೇನಲ್ಲಿ ಬಂದಿದೆ. ಬಿಲ್ನಲ್ಲಿ ಶೇ.30ರಿಂದ ಶೇ.60 ಹೆಚ್ಚುವರಿ ಮೊತ್ತ ಹಾಕಲಾಗಿದೆ. ಪ್ರತಿ ತಿಂಗಳು ಅಂದಾಜು 850ರಿಂದ 900 ರೂ. ಬರುತ್ತಿತ್ತು. ಏಪ್ರಿಲ್ನಲ್ಲಿ ಎಲ್ಲರೂ ಮನೆಯಲ್ಲೇ ಇದ್ದಿದ್ದರಿಂದ ತುಸು ಹೆಚ್ಚು ವಿದ್ಯುತ್ ಬಳಸಿರಬಹುದು. ಇದರಿಂದ ಸ್ವಲ್ಪ ಹೆಚ್ಚು ಯೂನಿಟ್ ಬಳಕೆಯಾಗಿರಬಹುದು. ಆದರೆ, 2 ತಿಂಗಳಿಗೆ ಸರಾಸರಿ 1,800 ರೂ. ಬರಬೇಕಿದ್ದ ಬಿಲ್ 2,300 ರೂ. ಬಂದಿದೆ ಎಂದು ಗ್ರಾಹಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
300 ರೂ. ಜಾಸ್ತಿ !
ಲಾಕ್ಡೌನ್ನಿಂದಾಗಿ ಏಪ್ರಿಲ್ ಮೊದಲ ವಾರ ಬಿಲ್ ಕೊಟ್ಟಿಲ್ಲ. ಆದರೂ ಆನ್ಲೈನ್ನಲ್ಲಿ ಪಾವತಿಸಿದ್ದೇನೆ. ಆದರೆ, ಇದೀಗ ಬಂದಿರುವ ಹೊಸ ಬಿಲ್ನಲ್ಲಿ 1,100 ರೂ. ಇದೆ. ಯಾವ ಆಧಾರದಲ್ಲಿ ಬಿಲ್ ಹಾಕಿದ್ದಾರೆ ಗೊತ್ತಾಗಿಲ್ಲ. ಪ್ರತಿ ತಿಂಗಳು ಸರಾಸರಿ 700-800 ರೂ.ಬರುತ್ತಿತ್ತು. ಇದೀಗ 300 ರೂ. ಜಾಸ್ತಿ ಬಂದಿದೆ. ಅದು ಹೇಗೆ ಸಾಧ್ಯ? ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಹಕರೊಬ್ಬರು ಒತ್ತಾಯಿಸಿದ್ದಾರೆ.
ಇದು ಸಾಫ್ಟ್ವೇರ್ ಮೂಲಕವೇ ನಡೆಸಲಾಗಿರುವ ಪ್ರಕ್ರಿಯೆ. ಇದರಲ್ಲಿ ಯಾವುದೇ ತಪು್ಪ ನಡೆದಿಲ್ಲ. ಬಿಲ್ನಲ್ಲೇ ಲೋಪವಾಗಿದ್ದರೆ ಆಯಾ ವಿಭಾಗದ ಬೆಸ್ಕಾಂ ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. | ಬೆಸ್ಕಾಂ ಅಧಿಕಾರಿ 200 ಯೂನಿಟ್ ನಂತರ ಪ್ರತಿ ಯುನಿಟ್ಗೆ 6.70 ರೂ. ಶುಲ್ಕ ಇದೆ. ಬೆಸ್ಕಾಂ ಸಿಬ್ಬಂದಿ ಗೊತ್ತುಗುರಿಯಿಲ್ಲದ ಬಿಲ್ ನೀಡಿ ಗ್ರಾಹಕರನ್ನು ಶೋಷಣೆ ಮಾಡುತ್ತಿದ್ದಾರೆ. | ಪ್ರದೀಪ್ ಗಂಗಾನಗರ ನಿವಾಸಿ