

ಮಹಾರಾಷ್ಟ್ರ: ಮಕ್ಕಳ ಆಟಿಕೆ ವಿಚಾರವಾಗಿ ಜಲಗಾಂವ್ ಜಿಲ್ಲೆಯ ಅಮಲ್ನೇರ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ನಗರದಲ್ಲಿ 48 ಗಂಟೆಗಳ ಕಾಲ ಕರ್ಫ್ಯೂ ವಿಧಿಸಿ, 31 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 9 ರಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಕ್ಕಳ ಆಟಿಕೆಗಳ ಬಗ್ಗೆ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಾಗ ಈ ಘಟನೆ ಸಂಭವಿಸಿದೆ. ನಂತರ ವಾದವು ಹಿಂಸಾತ್ಮಕ ತಿರುವು ಪಡೆದುಕೊಂಡಿತು ಮತ್ತು ಎರಡೂ ಗುಂಪುಗಳು ಪರಸ್ಪರ ಇಟ್ಟಿಗೆಯಿಂದ ಹೊಡೆದು ಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 31 ಜನರನ್ನು ಬಂಧಿಸಲಾಗಿದೆ. ಘರ್ಷಣೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಬದಿಯ ಮಾರಾಟಗಾರರ ಬಂಡಿಯನ್ನು ಉರುಳಿಸಿರುವುದನ್ನು ಮತ್ತು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾದ ಇಟ್ಟಿಗೆಯ ತುಂಡುಗಳು ಬಿದ್ದಿರುವ ದೃಶ್ಯ ಕಂಡು ಬಂದಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಜೂನ್ 10 ರಂದು ಬೆಳಿಗ್ಗೆ 11 ರಿಂದ ಜೂನ್ 12 ರ ಬೆಳಿಗ್ಗೆ 11 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಅಗತ್ಯವಿದ್ದರೆ ಕರ್ಫ್ಯೂ ವಿಸ್ತರಿಸಬಹುದು. ಕರ್ಫ್ಯೂ ಜಾರಿಯಾಗುವವರೆಗೂ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕರ್ಫ್ಯೂ ಜಾರಿಯಾದಾಗಿನಿಂದ ಪರಿಸ್ಥಿತಿ ಶಾಂತಿಯುತವಾಗಿದೆ. ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಜಲಗಾಂವ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಂ ರಾಜ್‌ಕುಮಾರ್ ಮಾತನಾಡಿ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸಣ್ಣ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕರ್ಫ್ಯೂ ಸಮಯದಲ್ಲಿ ಜನರು ತಮ್ಮ ಮನೆಗಳಲ್ಲಿಯೇ ಇದ್ದು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.