

‘ಕೃತಕ ಬುದ್ಧಿಮತ್ತೆಯಿಂದ (ಎಐ) ವ್ಯಕ್ತಿಗಳ ಯಥಾವತ್ ನಕಲು ವಿಡಿಯೋ, ಧ್ವನಿ ಅನುಕರಣೆ ಮಾಡಿ ಅಮಾಯಕರಿಗೆ ವಂಚನೆ ಮಾಡುತ್ತಿರುವುದನ್ನು ತಡೆಯಲು ಹಣಕಾಸು ತಂತ್ರಜ್ಞಾನ ಕಂಪನಿಗಳು ಗಮನ ಹರಿಸಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ಇದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಎಐ ತಂತ್ರಜ್ಞಾನದ ಕರಾಳ ಮುಖ ಹಲವು ಸಮಸ್ಯೆಗಳನ್ನು ತಂದೊಡ್ಡಿದ್ದು, ಹಣಕಾಸು ಕ್ಷೇತ್ರಕ್ಕಂತೂ ದೊಡ್ಡ ಸವಾಲಾಗಿ ಬದಲಾಗಿದೆ. ‘ನನ್ನದೇ ಹಲವಾರು ಡೀಪ್ಫೇಕ್ ವಿಡಿಯೋಗಳು ಆನ್ಲೈನ್ನಲ್ಲಿ ಪ್ರಸಾರವಾಗುತ್ತಿವೆ. ಇವು ಜನರನ್ನು ದಾರಿ ತಪ್ಪಿಸುತ್ತಿವೆ ಮತ್ತು ಸತ್ಯವನ್ನು ವಿರೂಪಗೊಳಿಸುತ್ತಿವೆ. ಹಾಗಾಗಿ, ಇವುಗಳಿಂದ ಜನರಿಗೆ ತುರ್ತಾಗಿ ರಕ್ಷಣೆ ಒದಗಿಸಬೇಕಾಗಿದೆ’ ಎಂದೂ ವಿತ್ತ ಸಚಿವರು ಹೇಳಿರುವುದು ಗಮನಾರ್ಹ.
ಫೇಕ್ ಫೋಟೋ ಹಾಗೂ ವಿಡಿಯೋಗಳ ಹಾವಳಿ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಚುನಾವಣೆ ಸಮಯದಲ್ಲಿ ನಾಯಕರ ನಕಲಿ ಭಾಷಣ ಮತ್ತು ವಿಡಿಯೋಗಳನ್ನು ಮಾಡಿ, ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಅಥವಾ ವಿಡಿಯೋವನ್ನು ತಿರುಚಿ ಇಲ್ಲವೆ ತಪು್ಪ ಅರ್ಥ ಬರುವಂತೆ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ. ಸಿನಿಮಾ ಕ್ಷೇತ್ರದಲ್ಲೂ ಸಿನಿನಟ, ನಟಿಯರ ನಕಲಿ ಕಂಟೆಂಟ್ಗಳನ್ನು ತಯಾರಿಸಿ ಹರಿಬಿಡಲಾಗುತ್ತಿದೆ. ಜನಸಾಮಾನ್ಯರಿಗೂ ಈ ಹಾವಳಿ ತಪ್ಪಿಲ್ಲ. ವ್ಯಕ್ತಿಯೊಬ್ಬನ ಫೋಟೋ ಎಡಿಟ್ ಮಾಡಿ, ಅದನ್ನು ತಪು್ಪ ಸಂದರ್ಭದಲ್ಲಿ ವೈರಲ್ ಮಾಡಲಾಗುತ್ತದೆ. ಎಐ ಕರಾಮತ್ತಿನಿಂದ ಸೃಷ್ಟಿಸುವ ಚಿತ್ರ ಮತ್ತು ವಿಡಿಯೋಗಳು ನೈಜ ಫೋಟೋ, ವಿಡಿಯೋಗಳ ಥರವೇ ಇರುವುದರಿಂದ, ಬಳಕೆದಾರರು ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಡೀಪ್ಫೇಕ್ ವಿಡಿಯೋಗಳಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸಂತ್ರಸ್ತರು ಮುಂದೆ ಬಂದು, ‘ಅದು ನಕಲಿ ವಿಡಿಯೋ. ಅದರಲ್ಲಿನ ಸಂಗತಿಗಳನ್ನು ನಂಬಬೇಡಿ’ ಎಂದು ಸ್ಪಷ್ಟನೆ ಕೊಡುವಷ್ಟರ ಹೊತ್ತಿಗೆ ನಕಲಿ ಫೋಟೋ ಅಥವಾ ವಿಡಿಯೋ ಎಲ್ಲ ಕಡೆ ವೈರಲ್ ಆಗಿ, ಎಡವಟ್ಟು ಸೃಷ್ಟಿಸಿರುತ್ತದೆ. ಈ ಬಗೆಯ ಫೋಟೋ, ವಿಡಿಯೋಗಳು ಚಾರಿತ್ರ್ಯವಧೆ, ಖಾಸಗಿತನಕ್ಕೆ ಧಕ್ಕೆ, ಆನ್ಲೈನ್ ವಂಚನೆ, ಸುಳ್ಳು ಸುದ್ದಿ ಹರಡುವಿಕೆ ಸೇರಿದಂತೆ ಹಲವು ಬಗೆಯ ಅಪಾಯಗಳನ್ನು ತಂದೊಡ್ಡಿದ್ದು, ಇದನ್ನು ತಡೆಯಲು ಎಐ ಕಂಪನಿಗಳ ಬಳಿ ಸೂಕ್ತ ಸಾಧನಗಳಿಲ್ಲ ಎಂಬುದು ಆತಂಕ ಹೆಚ್ಚಿಸಿದೆ. ಜನರು ಎಐ ಟೂಲ್ಗೆ ಕಣ್ಮುಚ್ಚಿ ವೈಯಕ್ತಿಕ ಮಾಹಿತಿ, ಚಿತ್ರಗಳನ್ನು ಕೊಡುವ ಮುಂಚೆ ಅದರಿಂದಾಗುವ ಪರಿಣಾಮಗಳ ಬಗ್ಗೆಯೂ ಚಿಂತಿಸಬೇಕು.
ಕೃತಕ ಬುದ್ಧಿಮತ್ತೆ (ಎ.ಐ) ಆಧರಿಸಿದ ನಕಲಿ ಸುದ್ದಿಗಳು ಹರಡುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಸಂಸದೀಯ ಸಮಿತಿ, ತಪು್ಪ ಮಾಹಿತಿ ಹರಡುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಕಾನೂನು ಹಾಗೂ ತಂತ್ರಜ್ಞಾನದ ಪರಿಹಾರ ಕಂಡುಹಿಡಯಬೇಕು ಎಂದು ಸರ್ಕಾರಕ್ಕೆ ಸೆಪ್ಟೆಂಬರ್ 12ರಂದು ಶಿಫಾರಸು ಮಾಡಿದೆ. ಈ ವರದಿಯನ್ನು ಸಮಿತಿಯು ಈಗಾಗಲೇ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಿದೆ. ಸಂಸತ್ನ ಮುಂದಿನ ಅಧಿವೇಶನದಲ್ಲಿ ಇದು ಮಂಡನೆಯಾಗಲಿದೆ. ಒಟ್ಟಾರೆ. ಎಐ ದುರ್ಬಳಕೆಯನ್ನು ತಡೆಯಲು ಸೂಕ್ತ ಮತ್ತು ಪರಿಣಾಮಕಾರಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಜನರಲ್ಲಿ ಈ ಕುರಿತು ಜಾಗೃತಿ, ಅರಿವು ಮೂಡಿಸಬೇಕಿದೆ.