ನಕಲಿ ನೋಂದಣಿಗೆ ಕಡಿವಾಣ; ತಿದ್ದುಪಡಿ ಕಾಯ್ದೆಗೆ ಅಧಿಕೃತ ಮುದ್ರೆ

krishnabyregowda
Published on

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಅಥವಾ ಕಾನೂನಿನಡಿ ನಿಷೇಧಿಸಲಾದ ದಾಖಲೆಗಳ ಆಧಾರದ ಮೇಲೆ ಅಸ್ತಿ ವಹಿವಾಟು ಅಧಿಕೃತಗೊಳಿಸುವ ಅಧಿಕಾರಿಗಳಿಗೆ ಶಿಕ್ಷೆ ಹಾಗೂ ಅಂತಹ ನೋಂದಣಿ ರದ್ದುಗೊಳಿಸುವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ದೊರೆತಿದ್ದು, ಸರ್ಕಾರ ಈ ಸಂಬಂಧ ರಾಜ್ಯಪತ್ರ ಪ್ರಟಿಸಿದೆ.

ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ತಿದ್ದುಪಡಿ ವಿದೇಯಕವನ್ನು ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿದ್ದರು.

1908ರ ನೋಂದಣಿ ಕಾಯ್ದೆಯಲ್ಲಿ ಯಾವುದೇ ಮಾಲೀಕತ್ವ ಇಲ್ಲದ, ದಾಖಲೆ ಇಲ್ಲದ ಅಥವಾ ನಿಜವಾದ ಮಾಲೀಕರಂತೆ ನಟಿಸುವ ಮೂಲಕ ಮಾಡಿದ ನೋಂದಣಿಯನ್ನು ರದ್ದುಪಡಿಸಲು ಹಾಗೂ ಈ ರೀತಿಯ ನೋಂದಣಿಗೆ ಕಾರಣರಾದ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುವ ಉದ್ದೇಶದೊಂದಿಗೆ ಈ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು.

ಮೋಸದ ನೋಂದಣಿ ಆಸ್ತಿಯ ನಿಜವಾದ ಮಾಲೀಕರು ಅನ್ಯಾಯಕ್ಕೆ ಒಳಗಾಗುತ್ತಿದ್ದರು. ಸಾರ್ವಜನಿಕರಿಗೆ ಉಂಟಾಗುವ ಇಂತಹ ಅನ್ಯಾಯ ತಡೆಯುವ ನಿಟ್ಟಿನಲ್ಲಿ ಈ ಮಸೂದೆ ಮಂಡಿಸಿ ಸದನದಲ್ಲಿ ಒಪ್ಪಿಗೆ ಪಡೆದು ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಲಾಗಿತ್ತು.

ಕೆಲವರು ಉದ್ದೇಶಪೂರ್ವಕವಾಗಿ ಮೋಸದ ನೋಂದಣಿ ಮಾಡುತ್ತಿದ್ದರು. ಕೆಲವು ಅಧಿಕಾರಿಗಳು ತಮಗೆ ಗೊತ್ತಿಲ್ಲದೆ ನಕಲಿ ನೋಂದಣಿ ಮಾಡಿದ್ದರು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net