ಕೈಸಾಲ ಕಿರುಕುಳಕ್ಕೆ ಲಗಾಮು; ಹೊಸ ಕಾಯ್ದೆ ಕರಡು ಪ್ರಸ್ತಾವನೆಗೆ ಇಂದು ಅಂತಿಮ ಸ್ಪರ್ಶ

Vidhanasoudha
Published on

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ದಬ್ಬಾಳಿಕೆ, ಬಲವಂತದ ಸಾಲ ವಸೂಲಿ, ದುಬಾರಿ ಬಡ್ಡಿ ಸುಲಿಗೆ ಮಟ್ಟಹಾಕಲು ಕಾನೂನಿನ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಈ ಸಂಬಂಧ ಬುಧವಾರ ಮಹತ್ವದ ಸಭೆ ನಡೆಸುತ್ತಿದೆ. ಸಭೆಯಲ್ಲಿ ಪಾಲ್ಗೊಳ್ಳಲಿರುವ ಕಾನೂನು ಮತ್ತು ಸಂಸದೀಯ ವ್ಯವಹಾರ, ಗೃಹ, ಆರ್ಥಿಕ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉದ್ದೇಶಿತ ಹೊಸ ಕಾಯ್ದೆ ಕರಡು ಸಿದ್ಧಪಡಿಸುವ ಜತೆಗೆ ಅಂತಿಮ ಸ್ಪರ್ಶ ನೀಡಲಿದ್ದಾರೆಂದು ತಿಳಿದು ಬಂದಿದೆ.

ಹೊಸ ಕಾಯ್ದೆ ಕರಡು ಸಿದ್ಧಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಲಭ್ಯ ಮಾಹಿತಿ ಪ್ರಕಾರ ಮೇಲ್ನೋಟಕ್ಕೆ ಕೆಲವು ಅಂಶಗಳ ಪಟ್ಟಿಯಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಮಾಹಿತಿ ತರಿಸಿಕೊಂಡು ಪರಾಮಶಿಸಬೇಕಾಗಿದೆ. ಇನ್ನೊಂದೆಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸಮಕ್ಷಮ ಬುಧವಾರ ಮಧ್ಯಾಹ್ನ ಸಭೆ ನಿಗದಿಯಾಗಿದೆ.

ಕಾಯ್ದೆಗಳ ಮಾಹಿತಿ ಸಂಗ್ರಹ: ಚಾಲ್ತಿ ನಾಲ್ಕು ಕಾಯ್ದೆಗಳಲ್ಲಿರುವ ವಿವರಗಳು, ಡಿ.ದೇವರಾಜ ಅರಸು ಕಾಲದಲ್ಲಿ ಜಾರಿಗೆ ತಂದಿದ್ದ ಗಿರವಿ ಕಾಯ್ದೆ ಹಾಗೂ ಆಂಧ್ರಪ್ರದೇಶದಲ್ಲಿ ಜಾರಿಗೊಳಿಸಿರುವ ಕಾಯ್ದೆ ವಿವರ ಕಾನೂನು ಪರಿಣತರ ಮುಖೇನ ಸಂಗ್ರಹಿಸಲಾಗಿದೆ.

ಪರಿಣತರ ಅಭಿಪ್ರಾಯ ಏನು?: ಮೈಕ್ರೋ ಫೈನಾನ್ಸ್ ಕಂಪನಿಗಳ ಬೆದರಿಕೆ, ದಬ್ಬಾಳಿಕೆ ಪ್ರಕರಣ ವರದಿಯಾಗಿವೆ ಎಂದಾಕ್ಷಣವೇ ಎಲ್ಲವನ್ನೂ ಒಂದೇ ಬೀಸಿಗೆ ಎತ್ತಿ ಒಗೆಯಲಾಗದು. ಇಷ್ಟಕ್ಕೂ ಮೈಕ್ರೋ ಫೈನಾನ್ಸ್ ಕಂಪನಿಗಳ ಒಟ್ಟು ವ್ಯವಹಾರದ ಮೇಲೆ ನಿಯಂತ್ರಣ ಕೇಂದ್ರ ಸರ್ಕಾರ, ಆರ್​ಬಿಐ ಅಧೀನದಲ್ಲಿದೆ. ಸಾಲಗಾರರ ಹಿತರಕ್ಷಣೆ, ಸಾಮಾಜಿಕ ಸುರಕ್ಷತೆ ಹಾಗೂ ಕಾನೂನು-ಸುವ್ಯವಸ್ಥೆ ನೆಲೆಯಲ್ಲಿ ‘ಬಲವಂತದ ಸಾಲ ವಸೂಲಿ ನಿರ್ಬಂಧ’ ಕಾಯ್ದೆ ಜಾರಿಗೆ ಅವಕಾಶವಿದೆ. ಆದರೆ ರಾಜ್ಯ ಸರ್ಕಾರದ ಹಂತದಲ್ಲಿ ಪ್ರತ್ಯೇಕವಾಗಿ ನೋಂದಣಿ ವ್ಯವಸ್ಥೆ ಸೃಜನೆ ಕಷ್ಟಸಾಧ್ಯವೆಂದು ಹಣಕಾಸು, ಕಾನೂನು ಕ್ಷೇತ್ರದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಸಮತೋಲನದ್ದೇ ಸವಾಲು: ಕಿರು ಹಣಕಾಸು ಹರಿವು ಕಾಯ್ದುಕೊಳ್ಳುವುದು, ಸಾಮಾಜಿಕ ಸ್ವಾಸ್ಥ್ಯ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸವಾಲು ಮುಂದಿಟ್ಟುಕೊಂಡು ಹೊಸ ಕಾಯ್ದೆ ಕರಡು ಸಿದ್ಧವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸಹಕಾರ ಸಂಘಗಳ ಕಾಯ್ದೆಯಡಿ ಪತ್ತಿನ ಸಂಘವೆಂದೋ ಅಥವಾ ಸಂಘ-ಸಂಸ್ಥೆಗಳ ನೋಂದಣಿ ಇಲಾಖೆಯಡಿ ಸಾಮಾಜಿಕ ಚಟುವಟಿಕೆಗಳ ಹೆಸರಿನಡಿ ನೋಂದಣಿ ಸಂಸ್ಥೆಗಳು ಸಾಲದ ವ್ಯವಹಾರ ಕ್ಷೇತ್ರಕ್ಕೆ ಇಳಿದಿರುವ ಸಾಧ್ಯತೆಗಳಿವೆ. ಅನಧಿಕೃತ, ಅಕ್ರಮ ಸಾಲ-ಬಡ್ಡಿ ವ್ಯವಹಾರಗಳು, ಅಧಿಕ ಬಡ್ಡಿ ವಸೂಲಿ, ಕಿರುಕುಳ, ದೌರ್ಜನ್ಯಗಳಿಗೆ ಕಡಿವಾಣ, ಲೇವಾದೇವಿದಾರರ ಮೇಲೆ ನಿಯಂತ್ರಣ ಸಾಧಿಸಲು ಈಗಿರುವ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ.

ಹೊಸ ಕಾಯ್ದೆ ರೂಪಿಸುವಾಗ ಅನಧಿಕೃತ ಕಿರುಸಾಲ ಸಂಸ್ಥೆಗಳು, ಲೇವಾದೇವಿದಾರರಿಗೆ ಬಿಗಿ ಮಾಡುವ ಭರದಲ್ಲಿ ಅಧಿಕೃತ, ಆರ್​ಬಿಐ ನಿಯಮದಂತೆ ಕೆಲಸ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳು, ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿಗಳ ಮೇಲೆ ಗದಾಪ್ರಹಾರವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆಯಾಗಿದೆ.

ಎಲ್ಲರೂ ಬ್ಯಾಂಕ್​ಗಳಿಗೆ ಹೋಗಲಾಗದು, ಕಿರುಸಾಲದ ವ್ಯವಸ್ಥೆಯಡಿ ಹಣಕಾಸಿನ ಹರಿವು ಕಾಯ್ದುಕೊಳ್ಳಲೆಂದು ಆರ್​ಬಿಐ ಕಿರುಸಾಲ ಹಾಗೂ ಬ್ಯಾಂಕಿಂಗೇತರ ಸಾಲದ ವ್ಯವಸ್ಥೆ ಮಾಡಿ, ನಿಯಂತ್ರಣ ವ್ಯವಸ್ಥೆ ಮಾಡಿಕೊಂಡಿದೆ.

ಸ್ವಸಹಾಯ ಗುಂಪುಗಳ ಆರು ತಿಂಗಳ ಉಳಿತಾಯದ ಮೇಲೆ 2 ರಿಂದ ಮೂರು ಪಟ್ಟು, ನಾಲ್ಕೈದು ಜನರುಳ್ಳ ಜಂಟಿ ಋಣ ಗುಂಪು (ಜೆಎಲ್​ಸಿ) ಹಾಗೂ ವೈಯಕ್ತಿಕ- ಹೀಗೆ ಮೂರು ವಿಧದಲ್ಲಿ ಇಂತಹ ಸಂಸ್ಥೆಗಳು ಸಾಲ ನೀಡುತ್ತಿವೆ.

ವೈಯಕ್ತಿಕ ಸಾಲ ಗರಿಷ್ಠ ಎರಡು ಲಕ್ಷ ರೂ. ಮೀರುವಂತಿಲ್ಲ. ಬಡ್ಡಿ ದರ ಶೇ.14 ರಿಂದ 21ರವರೆಗೆ ವಿಧಿಸಲು ಅವಕಾಶವಿದೆ. ಮಂಜೂರಾದ ಸಾಲ ಬ್ಯಾಂಕ್ ಖಾತೆಗೆ ಜಮಾ, ಭದ್ರತೆ ಪಡೆಯಬೇಕಾಗಿಲ್ಲ. ಫೇರ್ ಪ್ರಾಕ್ಟಿಸ್ ಸಂಹಿತೆಯಡಿ ಪ್ರತಿನಿಧಿಗಳಿಗೆ ಗುರುತಿನ ಚೀಟಿ ಕಡ್ಡಾಯ, ಸಂಜೆ 5ರ ಬಳಿಕ ಸಾಲ ವಸೂಲಿಗೆ ಹೋಗುವಂತಿಲ್ಲ, ನಯ-ವಿನಯ, ಸಜ್ಜನಿಕೆ ಭಾಷೆ ಬಳಕೆ ಇತ್ಯಾದಿಗಳ ಬಗ್ಗೆ ಆರ್​ಬಿಐ ತರಬೇತಿ ನೀಡಿ, ನಿಯಮ ಪಾಲಿಸಲು ಸೂಚಿಸುತ್ತದೆ.

ನಬಾರ್ಡ್​ನ ಅಂಗ ಸಂಸ್ಥೆ ನ್ಯಾಬ್ ಫಿನ್ ಎನ್​ಜಿಒಗಳ ಮುಖೇನ ಕಿರುಸಾಲ ನೀಡುತ್ತಿವೆ. ಡಿಸಿಸಿ ಬ್ಯಾಂಕ್​ಗಳು ಕೂಡ ಈ ಕ್ಷೇತ್ರಕ್ಕೆ ಧುಮುಕಿವೆ. ಕಿರು ಹಣಕಾಸು ವ್ಯವಸ್ಥೆಯು ಆರ್ಥಿಕ ಸದೃಢತೆ, ಸ್ವಾವಲಂಬಿ ಜೀವನಕ್ಕೆ ನೆರವಾಗಬೇಕು ಎನ್ನುವುದು ಆರ್​ಬಿಐ ಉದ್ದೇಶವಾಗಿದೆ. ಆದರೆ ಆರ್​ಬಿಐ ಪರವಾನಗಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಕಿರುಸಾಲ ಸಂಸ್ಥೆಗಳ ಅತಿರೇಕದ ವರ್ತನೆ, ಶೋಷಣೆಗೆ ಮೂಗುದಾರ ಬಿಗಿಯಲು ಕಠಿಣ ಕ್ರಮಕೈಗೊಂಡು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮೂಲಗಳು ವಿವರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net