ಉತ್ತರ ವಿವಿ ತಾತ್ಕಾಲಿಕ ಸಿಬ್ಬಂದಿಗೆ ಸಂಚಿತ ವೇತನ?

nourth vv
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ಬೋಧಕೇತರ ಸಿಬ್ಬಂದಿಯ ಸೇವೆಯನ್ನು ಕಾಯಂಗೊಳಿಸಿ ಸಂಚಿತ ವೇತನಕ್ಕೆ ಶಿಫಾರಸು ಮಾಡುವ ವಿಚಾರ ಮುನ್ನೆಲೆಗೆ ಬಂದಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು 2017ರಲ್ಲಿ ಸ್ಥಾಪನೆಯಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಥಮ ದರ್ಜೆ, ಸ್ನಾತಕೋತ್ತರ ಹಾಗೂ ವಿವಿಧ ರೀತಿಯ ಕಾಲೇಜುಗಳು ವ್ಯಾಪ್ತಿಗೆ ಒಳಪಟ್ಟಿದ್ದು, ಶೈಕ್ಷಣಿಕ ಕಾರ್ಯಚಟುವಟಿಕೆಗಳು ಚಾಲ್ತಿಯಲ್ಲಿವೆ. ವಿವಿ ಕಾರ್ಯಚಟುವಟಿಕೆಗಳನ್ನು ನಡೆಸಲು ಅಗತ್ಯ ಮಾನವ ಸಂಪನ್ಮೂಲವನ್ನು ಸರ್ಕಾರ ಕುಲಸಚಿವರು ಸೇರಿ ಉನ್ನತ ಹುದ್ದೆಗಳನ್ನು ಸರ್ಕಾರವೇ ಭರ್ತಿ ಮಾಡಿದೆ. ಬಾಕಿಯಿದ್ದ ಬೋಧಕೇತರ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲು ವಿವಿಗೆ ಅಧಿಕಾರ ನೀಡಲಾಗಿತ್ತು.
ಆದರೆ, ವಿವಿಯ ಸಿಂಡಿಕೇಟ್​ ಸದಸ್ಯರು ಹಾಗೂ ಕೆಲ ಅಧಿಕಾರಿಗಳು ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ, ಇದಕ್ಕೂ ಮೊದಲು ರೋಸ್ಟರ್​ ಪದ್ಧತಿ ಪಾಲನೆ ಮಾಡಿಲ್ಲ. ನೇಮಕಾತಿಯ ಪ್ರಕಟಣೆ ಹೊರಡಿಸಿಲ್ಲ, ಜತೆಗೆ ನೇಮಕಾತಿ ಸಮಿತಿ ರಚನೆ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ತಾತ್ಕಾಲಿಕ ಸಿಬ್ಬಂದಿಯನ್ನು ಸಂಚಿತ ವೇತನಕ್ಕೆ ಶಿಾರಸು ಮಾಡುವುದು ಕಾನೂನು ಬಾಹಿರ ಎಂದು ತಿಳಿಸಿದ್ದರೂ ಕೆಲ ಸಿಂಡಿಕೇಟ್​ ಸದಸ್ಯರು ಸಭೆಯಲ್ಲಿ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಪಟ್ಟಿ ಕಳುಹಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿರುವ ಬೋಧಕೇತರ ಸಿಬ್ಬಂದಿಯನ್ನು ಸಂಚಿತ ವೇತನಕ್ಕೆ ಶಿಫಾರಸು ಮಾಡುವ ಪ್ರಕ್ರಿಯೆಗೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಸಭೆಯಲ್ಲಿ ಸಂಚಿತ ವೇತನ ಬಗ್ಗೆ ವಿಶ್ವವಿದ್ಯಾಲಯದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ರಾಜ್ಯದ ಇತರ ವಿಶ್ವವಿದ್ಯಾಲಯಗಳಿಗೆ ನೀಡಿರುವ ಆದೇಶದಂತೆ ನೀಡಲು ನಿರ್ದೇಶಿಸುವಂತೆ ಕೂಗು ಕೇಳಿಬಂದಿತ್ತು. ನೌಕರರ ಕೋರಿಕೆಯು ನಿಯಮಗಳ ಅನ್ವಯ ಇರುವುದಿಲ್ಲವಾದರೂ ರಾಜ್ಯದ ಇತರ ವಿವಿಗಳು ಹೊರಡಿಸಿರುವ ಕಚೇರಿ ಆದೇಶ ಹಾಗೂ ಉಲ್ಲೇಖಗಳನ್ನು ಪರಿಶೀಲಿಸಿ ಸಭೆಗೆ ಮಂಡಿಸಲು ರ್ನಿಣಯಿಸಲಾಗಿದೆ. ಜತೆಗೆ ಸರ್ಕಾರಿ ನಿಯಮಗಳ ಅನ್ವಯ ತಾತ್ಕಾಲಿಕ ನೌಕರರಿಗೆ ಕನಿಷ್ಠ ವೇತನದಂತೆ ಮಾಹೆಯಾನ ನೀಡುವ ಬಗ್ಗೆ ಪರಿಶೀಲಿಸುವುದು ಮತ್ತು ಗುತ್ತಿಗೆ ಆದೇಶವನ್ನು ವಿವಿಯಲ್ಲಿ ಪಾಲಿಸುವ ರ್ನಿಣಯ ಕೈಗೊಳ್ಳಲು ಮುಂದಾಗಿದೆ.

  • ಶಿಕ್ಷಣ ಸಚಿವರಿಗೆ ಮನವಿ
    ವಿವಿಯಲ್ಲಿ ಹಲವಾರು ವರ್ಷಗಳಿಂದ ಯಾವುದೇ ರೀತಿಯ ಸೇವಾ ಭದ್ರತೆಯಿಲ್ಲದೆ ಅತಿ ಕಡಿಮೆ ವೇತನ ಪಡೆದು ವಿವಿಧ ಹುದ್ದೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಅವರ ಕುಟುಂಬಗಳ ನಿರ್ವಹಣೆ ಮತ್ತು ಜೀವನ ಪರಿಸ್ಥಿತಿ ಕಷ್ಟಕರ ಹಾಗೂ ಶೋಚನೀಯವಾಗಿರುತ್ತದೆ. ಆದ ಕಾರಣ ಸದರಿ ನೌಕರರ ಸೇವೆಯನ್ನು ಮಾನವೀಯ ದೃಷ್ಟಿಯಿಂದ ಕಾಯಂಗೊಳಿಸಲು ಸೂಕ್ತ ಆದೇಶ ನೀಡಬೇಕು ಎಂದು ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್​.ಎಂ.ಮುನಿಯಪ್ಪ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
  • ಸಂಚಿತ ವೇತನದ ಮಾನದಂಡ
    - ಪಿಂಚಣಿ ಹೊರತುಪಡಿಸಿ ಸರ್ಕಾರಿ ಉದ್ಯೋಗಿಗೆ ಸಿಗುವ ಎಲ್ಲ ಸೌಲಭ್ಯಗಳಿಗೂ ಅರ್ಹರಾಗಿರುತ್ತಾರೆ.
    - ಸಂಚಿತ ವೇತನ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಅವಕಾಶವಿರುವುದಿಲ್ಲ.
    - ಸಿಬ್ಬಂದಿಗೆ 62 ವರ್ಷ ಆಗುವವರೆಗೆ ವಿವಿಯಲ್ಲಿ ಕೆಲಸ ಮಾಡಬಹುದು.
    - ಟಿಎ-ಡಿಎ, ವೇತನ ಹೆಚ್ಚಳ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಬೇಡಿಕೆ ಈಡೇರಿಸಲು ಮನವಿ:
ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ನಿಯಮ ಪಾಲನೆ ಮಾಡಲಾಗಿದೆ. ಈಗ ಕೆಲವರು ವಿವಿಧ ಬೇಡಿಕೆ ಈಡೇರಿಸಲು ಸಿಂಡಿಕೇಟ್​ನಲ್ಲಿ ತೀರ್ಮಾನ ಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net