

ಶಿವಮೊಗ್ಗ: ಪ್ರೌಢಿಮೆ ಮತ್ತು ಉತ್ತಮ ಶಿಕ್ಷಣದಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವತಿಯಿಂದ ಗುರುವಾರ ಕುವೆಂಪು ರಂಗಮಂದಿರಲ್ಲಿ ಏರ್ಪಡಿಸಿದ್ದ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವಿಭಾಗ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಪೂರ್ಣ ವ್ಯಕ್ತಿತ್ವಕ್ಕಾಗಿ ಸಂಸ್ಕಾರ ಮತ್ತು ಸಾಂಸ್ಕೃತಿಕ ನೆಲೆಗಟ್ಟುಗಳು ಬೇಕಿದೆ. ಅಂತಹ ನೆಲೆಗಟ್ಟುಗಳ ಮೂಲ ಬೇರು ಕುಟುಂಬದ ಆಧಾರದ ಮೇಲೆ ನಿಂತಿದೆ. ಭವಿಷ್ಯದ ಪ್ರಜೆಗಳಾಗಿ ಹೊರಹೊಮ್ಮುವ ಮಕ್ಕಳಿಗೆ ಸಂಸ್ಕಾರ ಆತ್ಮವಿಶ್ವಾಸ ನೀಡಲಿದೆ ಎಂದು ತಿಳಿಸಿದರು.
ಸಾಹಿತ್ಯ ಅಧ್ಯಯನ ಬದುಕಿನ ಅಂತಃಶಕ್ತಿ ಹೆಚ್ಚಿಸಲಿದೆ. ಒಳ್ಳೆಯ ಸ್ನೇಹಿತರನ್ನು ಪಡೆಯಲು ಸದಾ ಪ್ರಯತ್ನಿಸಬೇಕು. ಬದುಕು ತಂದೆ ತಾಯಿಯ ಕೊಡುಗೆ, ಜ್ಞಾನ ಗುರುವಿನ ಕೊಡುಗೆ, ಆದರೆ ಸ್ನೇಹ ಭಗವಂತನ ಕೊಡುಗೆ. ನಮ್ಮ ಪ್ರಭಾವಕ್ಕಿಂತ ಸ್ವಭಾವ ನೋಡಿ ಬರುವ ಜನರೊಂದಿಗೆ ಸ್ನೇಹ ಮಾಡಬೇಕು. ಎಂದಿಗೂ ಕೆಟ್ಟವರ ಮೇಲೆ ನಂಬಿಕೆಯಿಡದೇ ಒಳ್ಳೆಯವರ ಮೇಲೆ ಸಂಶಯ ಪಡದೇ ಮೌಲ್ಯಾಧಾರಿತ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವೈಜ್ಞಾನಿಕ ಮನೋಭಾವದೊಂದಿಗೆ ವಿಷಯಗಳನ್ನು ವಾಸ್ತವ ವಿಮರ್ಶೆಯೊಂದಿಗೆ ಆಚರಣೆಗೆ ತರಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಅದು ಅಂಧಶ್ರದ್ಧೆಯಾಗಿ ಉಳಿದುಬಿಡುತ್ತದೆ. ನಮ್ಮ ಸಂಸ್ಕೃತಿ, ಆಚರಣೆ, ಕಲಿಕೆ ಎಲ್ಲವನ್ನೂ ಮುಕ್ತವಾಗಿ ವಿಮರ್ಶಿಸಬೇಕು ಎಂದರು.
ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಚಾರ್ಯ ಎಸ್.ಆರ್.ವೆಂಕಟೇಶ್, ಕಸ್ತೂರಬಾ ಪ್ರೌಢಶಾಲೆ ನಿವೃತ್ತ ಉಪ ಪ್ರಾಚಾರ್ಯ ಕೆ.ಆರ್.ಉಮೇಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶಾಯಿಸ್ತಾ ರಿಯಾಜ್, ಉಪಾಧ್ಯಕ್ಷೆ ಜಿ.ಡಿ.ಹೇಮಾವತಿ, ಕಾರ್ಯದರ್ಶಿ ಶಾಲಿನಿ, ಸಹ ಕಾರ್ಯದರ್ಶಿ ಲಕ್ಷ್ಮೀಬಾಯಿ ಉಪಸ್ಥಿತರಿದ್ದರು.