

ಕೋಣಂದೂರು: ವ್ಯಕ್ತಿ ಅಳಿದ ಮೇಲೂ ವ್ಯಕ್ತಿತ್ವ ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕೇವಲ ವ್ಯಕ್ತಿಗಳಾಗಿ ಬೆಳೆಯದೆ ವ್ಯಕ್ತಿತ್ವ ಬೆಳಸಿಕೊಳ್ಳುವುದಕ್ಕೆ ಒತ್ತು ನೀಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು.
ಕೋಣಂದೂರಿನ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಂಕಗಳಿಕೆ ಮಾತ್ರ ಸೀಮಿತವಾಗಿರದೆ ಜೀವನದಲ್ಲಿ ಸಜ್ಜನಿಕೆ, ಸರಳತೆಗಳನ್ನು ಮೈಗೂಡಿಸಿಕೊಳ್ಳಬೇಕು. ಆಲಿಸುವ ಕಿವಿಗಳು, ಸಹಾಯ ಹಸ್ತ ನೀಡುವ ಕೈಗಳು ಪ್ರೀತಿಸುವ ಹೃದಯ ನಮ್ಮದಾಗಬೇಕು. ವಿದ್ಯಾರ್ಜನೆ ಜತೆಗೆ ತಮಗೆ ದೊರಕುವಂತಹ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮದರ್ಸ್ ಡೇ ಪುಡ್ ಮಾಲಕಿ ಮಧುರ ಅನಿಲ್ ಜೋಯ್ಸ, ಅವಕಾಶಗಳು ನಮ್ಮನ್ನು ಅರಿಸಿಬಂದಾಗ ನಾವು ಕೈಚೆಲ್ಲಿ ಕುಳಿತರೆ ಮತ್ತೊಮ್ಮೆ ಜೀವನದಲ್ಲಿ ಅವಕಾಶಗಳು ಬರಲಾರವು. ಬದುಕಿನಲ್ಲಿ ಕನಸು ಕಾಣುವುದು ಬಹಳ ಮುಖ್ಯ. ಆ ಕನಸೇ ನಮ್ಮ ಸಾಧನೆಗೆ ಮಾರ್ಗವಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸತ್ಯನಾರಾಯಣ್, ಸಹಕಾರಿ ತತ್ವದಡಿ ಕಷ್ಠಕರವಾದ ಸಮಸ್ಯೆಗಳನ್ನು ಎದುರಿಸಿ ಹೇಗೆ ಯಶಸ್ಸನ್ನು ಗಳಿಸಬಹುದೆಂದು ತಿಳಿಸಿದರು. ಪ್ರಾಚಾರ್ಯ ಕೆ.ಎಂ.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು.