'ಭಾರತ' ಹೆಸರಿನ ವಿವಾದ; ಭಾರತೀಯ ಸಾಹಿತ್ಯದಲ್ಲಿ‌ ಎಲ್ಲೂ ಇಂಡಿಯಾ ಹೆಸರು ‌ಕಂಡುಬಂದಿಲ್ಲ: ಸಿ.ಟಿ. ರವಿ

Untitled design - 2023-09-06T140154.486
Published on

ಬೆಂಗಳೂರು: ಕೇಂದ್ರ ಸರ್ಕಾರ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಮಾಡಲಿದ್ದಾರೆ ಎಂಬ ಸಂಗತಿ ಹೊರಬೀಳುತ್ತಿದ್ದಂತೆ, ಇದೀಗ ಸಾಕಷ್ಟು ಚರ್ಚೆಗಳು ಬುಗಿಲೆದ್ದಿವೆ. ಸದ್ಯ ಈ ಕುರಿತು ರಾಜಕೀಯ ವಲಯದಲ್ಲಿ ಮಾತಿನ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ಭಾರತೀಯ ಸಾಹಿತ್ಯದಲ್ಲಿ‌ ಎಲ್ಲೂ ಇಂಡಿಯಾ ಹೆಸರು ‌ಕಂಡುಬಂದಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಿ.ಟಿ. ರವಿ, "ಭಾರತ‌ ಎಂಬ ಹೆಸರು ‌ಇವತ್ತು ಇಟ್ಟ ಹೆಸರಲ್ಲ. ಅನೇಕ ವರ್ಷಗಳಿಂದಲೂ ಭಾರತ ಎಂದೇ ಗುರುತ್ತಿಸುತ್ತೇವೆ. ಭಾ‌ ಅಂದ್ರೆ ಬೆಳಕು ಎಂದು ಪರಿಭಾವಿಸುತ್ತೇವೆ. ಭರತ ಖಂಡ ಎಂದೇ ಹೇಳುತ್ತೇವೆ. ಭಾರತೀಯರ ಶೌರ್ಯ‌ ಪರಿಚಯಿಸುವ ಹಾಡು‌ ಈಗಲೂ ಕಿವಿಯಲ್ಲಿ ಇಂಪಾಗಿದೆ" ಎಂದು ಹೇಳಿದರು.

"ಮಹಾತ್ಮ ಗಾಂಧಿ ಅವರ ‌ಜೀವನ ಚರಿತ್ರೆಯಲ್ಲೂ ರಾಜಕೀಯ ಭಾಷಣದಲ್ಲಿ ಹೇ ರಾಮ್ ಜತೆಗೆ ಭಾರತ್ ಮಾತಾಕಿ ಜೈ ಎಂದು ಹೇಳಿದ್ದರು. ಹೋರಾಟಗಾರರು ಭಾರತ್ ಮಾತಾಕಿ‌ ಜೈ ಎನ್ನುತ್ತಲೇ‌‌ ನೇಣಿನ‌ ಕುಣಿಕೆಗೆ ಒಡ್ಡಿದ್ದರು. ಈಗ ಈ ವಿವಾದದ ದೃಷ್ಟಿ ಯಾಕೆ? ಇಂಡಿಯಾ ಎಂಬುದನ್ನು ವ್ಯಾವಹಾರಿಕವಾಗಿ ಅರಗಿಸಿಕೊಂಡಿದ್ದೇವೆ. ಪರ್ಷಿಯನರು ಸಿಂಧೂ‌ ನದಿಯನ್ನು ಉಚ್ಷರಿಸಲಾರದೇ ಹಿಂದು ಎಂದು ಕರೆದರು. ವಸಾಹತು ಶಾಹಿಗಳ ಮುಂಚೆ ಇಂಡಿಯಾ‌ ಹೆಸರು ‌ಕಂಡುಬಂದಿಲ್ಲ" ಎಂದು ಹೇಳಿದರು.

"ಭಾರತೀಯ ಸಾಹಿತ್ಯದಲ್ಲಿ‌ ಎಲ್ಲೂ ಇಂಡಿಯಾ ಹೆಸರು ‌ಕಂಡುಬಂದಿಲ್ಲ. ಅಸ್ಮಿತೆ‌ ಹಾಗೂ ಅಸ್ತಿತ್ವ ‌ಕಳೆದುಕೊಂಡರೆ‌ ನಾವು ಯಾರು? ಭಾರತವನ್ನೇ ವಿರೋಧಿಸುವ ಮನಸ್ಥಿತಿಗೆ‌ ಬಂದಿದ್ದಾರೆ. ಇದು ಉಳಿಗಾಮಾನ‌ ಸ್ಥಿತಿ. ಬಹುಶಃ ಇದಕ್ಕೆ ಗಾಂಧಿಯವರು ಕಾಂಗ್ರೆಸ್ ‌ವಿಸರ್ಜಿಸಿದ್ದರು" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net