

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಂಪುಟ ಸಭೆಯಲ್ಲಿ ಭಾಗವಹಿಸುವ ಅವರಿಗೆ ಒಲಿದು ಬಂದಿದ್ದು ವಿಶೇಷ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ಸಚಿವ ಸಂಪುಟ ಸಭೆ, ಅನಿವಾರ್ಯ ಕಾರಣಗಳಿಂದ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಕಾರಣದಿಂದ ಮೊದಲ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಶಾಲಿನಿ ರಜನೀಶ್ ಪಾಲಿಗೆ ಒಲಿದು ಬರಲಿಲ್ಲ.
ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಸಂಪುಟ ಸಭೆ ನಡೆದಿರುವ ಉದಾಹರಣೆಗಳಿಲ್ಲ. ಹಾಗಾಗಿ ಇದೊಂದು ದಿನ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿತ್ತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
ಸಂಪುಟ ಸಭೆಯ ಬಳಿಕ ಮುಖ್ಯಕಾರ್ಯದರ್ಶಿಗಳ ಕಚೇರಿಗೆ ಬಂದ ಶಾಲಿನಿ ರಜನೀಶ್ ಅವರಿಗೆ ಹಿರಿಯ ಅಧಿಕಾರಿಗಳು, ಸರ್ಕಾರಿ ನೌಕರರ ಸಂಘ ಸೇರಿದಂತೆ ಸಂಘ ಸಂಸ್ಥೆಗಳ ಪ್ರಮುಖರು ಭೇಟಿ ಮಾಡಿ ಶುಭ ಹಾರೈಸಿದರು.