ಹಾಂಕಾಂಗ್ ಮೇಲೆ ದಬ್ಬಾಳಿಕೆ ಕಾನೂನು; ವಿವಾದಾತ್ಮಕ ಕಾಯ್ದೆಗೆ ವ್ಯಾಪಕ ಪ್ರತಿಭಟನೆ

page 8 3
Published on

| ರಾಘವ ಶರ್ಮ ನಿಡ್ಲೆ

ನವದೆಹಲಿ: ಹಾಂಕಾಂಗ್​ಗೆ ಅನ್ವಯವಾಗುವ ಹೊಸ ರಾಷ್ಟ್ರೀಯ ಭದ್ರತಾ ಕಾನೂನೊಂದನ್ನು ಚೀನಾ ಸರ್ಕಾರ ಜಾರಿಗೆ ತಂದಿದೆ. ಇದಕ್ಕೆ ಸ್ಥಳೀಯ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಾಂಕಾಂಗ್ ತನ್ನ ಮೂಲ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ಆತಂಕ ಅವರದ್ದು. ಚೀನಾ ನಮ್ಮ ಸ್ವಾತಂತ್ರ್ಯ ಕಿತ್ತುಕೊಂಡಿದೆ ಎಂಬ ಇಲ್ಲಿನ ಆಕ್ರೋಶಕ್ಕೆ ಬ್ರಿಟನ್, ಅಮೆರಿಕವೂ ದನಿ ನೀಡಿದೆ. ಆದರೆ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಇವ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತಮ್ಮ ಉದ್ದೇಶ ಈಡೇರಿಕೆಗೆ ಮುಂದಾಗಿದ್ದಾರೆ.

ಸಂಸತ್ ಸಮಿತಿಯಿಂದ ವಿಚಾರಣೆ: ವಿವಿಧ ರಾಷ್ಟ್ರಗಳಲ್ಲಿರುವಂತೆ, ಹಾಂಕಾಂಗ್ ನ್ಯಾಯಾಲಯಗಳೂ ಆರೋಪಿಗಳ ವಾದಕ್ಕೂ ಸಮಾನ ಅವಕಾಶ ನೀಡುತ್ತಿದ್ದವು. ಆದರೆ, ಚೀನಾ ಹೇರಿರುವ ಭದ್ರತಾ ಕಾನೂನು ಈ ಅವಕಾಶಗಳ ಮೇಲೆ ಸವಾರಿ ಮಾಡಲಿದ್ದು, ಅಪರಾಧ ಕೃತ್ಯಗಳಲ್ಲಿ ಸಂಸತ್ತಿನ ಸಮಿತಿ ಪ್ರಕಟಿಸುವ ಶಿಕ್ಷೆಹಯೇ ಅಂತಿಮವೆನಿಸಲಿದೆ. ಒಂದು ವೇಳೆ ವಿಚಾರಣೆ, ‘ದೇಶದ ರಹಸ್ಯ ವಿಷಯ’ ಅಥವಾ ‘ಕಾನೂನು ಸುವ್ಯವಸ್ಥೆ’ಗೆ ಸಂಬಂಧಿಸಿದ್ದಾಗಿದ್ದರೆ, ಅದನ್ನು ಮಾಧ್ಯಮ ಮತ್ತು ಸಾರ್ವಜನಿಕರ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ರಾಷ್ಟ್ರೀಯ ಭದ್ರತೆ ವಿಷಯಗಳನ್ನು ನಿಭಾಯಿಸಲು ಹಾಂಕಾಂಗ್ ಪೊಲೀಸ್ ಪಡೆ ಪ್ರತ್ಯೇಕ ಇಲಾಖೆ ಹೊಂದಿರಲಿದೆ. ಅಲ್ಲದೆ, ನಗರದ ನ್ಯಾಯ ಇಲಾಖೆಯು ಇದಕ್ಕಾಗಿ ವಿಶೇಷ ಕಾನೂನು ವಿಭಾಗ ರಚಿಸಬೇಕಾಗುತ್ತದೆ.

ಬೀಜಿಂಗ್​ನದ್ದೇ ಮೇಲುಸ್ತುವಾರಿ: ‘ದುಷ್ಕೃತ್ಯ’ಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿದರೂ, ಅವೆಲ್ಲದರ ಮೇಲುಸ್ತುವಾರಿಯನ್ನು ಚೀನಾ ಸರ್ಕಾರ ನೋಡಿಕೊಳ್ಳಲಿದೆ. ಹೊಸಕಾನೂನಿನ ಪ್ರಕಾರ, ಹಾಂಕಾಂಗ್ ಮುಖ್ಯ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ‘ರಾಷ್ಟ್ರೀಯ ಭದ್ರತೆ ಕಾಪಾಡುವ ಸಮತಿ’ ರಚನೆಯಾಗಲಿದೆ. ಈ ಸಮಿತಿ ನ್ಯಾಯಾಂಗ ಪರಿವೀಕ್ಷಣೆ ವ್ಯಾಪ್ತಿಗೆ ಬರುವುದಿಲ್ಲ! ಚೀನಾ ಸರ್ಕಾರ ನೇಮಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಮಿತಿಯಲ್ಲಿರಲಿದ್ದು, ಭದ್ರತಾ ನೀತಿಗಳನ್ನು ರೂಪಿಸುವ ಜವಾಬ್ದಾರಿ ಹೊಂದಿರುತ್ತಾರೆ.

ಚೀನಾಕ್ಕೆ ಬಿಟ್ಟುಕೊಟ್ಟಿದ್ದ ಬ್ರಿಟನ್: ಹಾಂಕಾಂಗ್ 156 ವರ್ಷಗಳ ಕಾಲ ಬ್ರಿಟಿಷರ ನಿಯಂತ್ರಣದಲ್ಲಿತ್ತು. 1984ರ ಒಪ್ಪಂದದಂತೆ, ಹಾಂಕಾಂಗ್​ನ್ನು ಚೀನಾಕ್ಕೆ ಬಿಟ್ಟುಕೊಡಲು ನಿರ್ಧರಿಸಿತು. ಈ ಸಂದರ್ಭದಲ್ಲಿ ಬ್ರಿಟನ್ ಒಂದಿಷ್ಟು ಷರತ್ತುಗಳನ್ನು ಚೀನಾದ ಮುಂದಿಟ್ಟಿತ್ತು. ಹಾಂಕಾಂಗ್ ಸ್ವಾಯತ್ತತೆಗೆ ಧಕ್ಕೆ, ಪ್ರಜೆಗಳ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದ್ದವು. ಅದಲ್ಲದೆ, ಚೀನಾದ ಕಮ್ಯುನಿಸ್ಟ್ ಮಾದರಿ ವ್ಯವಸ್ಥೆ ಹೇರದೆ, ಹಾಂಕಾಂಗ್​ನ ಬಂಡವಾಳಶಾಹಿ ವ್ಯವಸ್ಥೆ ಮುಂದುವರಿಸಬೇಕೆಂದೂ ಒಪ್ಪಿಕೊಳ್ಳಲಾಯಿತು.ಅಂತೆಯೇ, 1997ರಲ್ಲಿ ಹಾಂಕಾಂಗ್ ಚೀನಾದ ವ್ಯಾಪ್ತಿಗೆ ಬಂತು ಮತ್ತು ಚೀನಾ ಅದನ್ನು ತನ್ನ ವಿಶೇಷ ಆಡಳಿತಾತ್ಮಕ ಪ್ರದೇಶ ಎಂದು ಗುರುತಿಸಿತು. ‘ಒಂದು ದೇಶ, ಎರಡು ಆಡಳಿತ’ದ ತತ್ವವನ್ನು ಅಳವಡಿಸಿತು.

ಬ್ರಿಟನ್​ಗೆ ಬರುವಂತೆ ಆಹ್ವಾನ: ಹಾಂಕಾಂಗ್ ಸ್ವಾಯತ್ತೆ ಕಿತ್ತುಕೊಳ್ಳುವ ಚೀನಾದ ಕಾನೂನನ್ನು ಕಟುವಾಗಿ ಟೀಕಿಸಿರುವ ಬ್ರಿಟನ್ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್, 30 ಲಕ್ಷ ಹಾಂಕಾಂಗ್ ನಿವಾಸಿಗರಿಗೆ ಬ್ರಿಟನ್ ಪೌರತ್ವ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ದೇಶಕ್ಕೆ ಬಂದು ನೆಲೆಸುವಂತೆ ಆಹ್ವಾನ ನೀಡಿದ್ದಾರೆ.

ಸಂವಿಧಾನದಲ್ಲೇನಿದೆ?: ಹಾಂಕಾಂಗ್​ನಲ್ಲಿ ಬೇಸಿಕ್ ಲಾ ಎಂಬ ಸಂವಿಧಾನವಿದೆ. ಇದರ ಮೂಲಕ, ‘‘ಹಾಂಕಾಂಗ್​ನ ಉದಾರ ನೀತಿಗಳು, ಆಡಳಿತಾತ್ಮಕ ವ್ಯವಸ್ಥೆ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ವೈಯಕ್ತಿಕ ಹಕ್ಕು-ಸ್ವಾತಂತ್ರ್ಯ ಎತ್ತಿಹಿಡಿಯಲಾಗಿದೆ. 1997ರಿಂದ ಹಿಡಿದು ಮುಂದಿನ 50 ವರ್ಷಗಳಿಗೆ ಇದು ಅನ್ವಯವಾಗಲಿದೆ ಎಂದು ಬ್ರಿಟನ್ ಜತೆಗೆ ಮಾಡಿಕೊಳ್ಳಲಾದ ಒಪ್ಪಂದ ವೇಳೆ ಖಚಿತಪಡಿಸಲಾಗಿತ್ತು. ‘ಬೇಸಿಕ್ ಲಾ’ದ 23ನೇ ಆರ್ಟಿಕಲ್ ಪ್ರಕಾರ, ಹಾಂಕಾಂಗ್ ತನ್ನದೇ ಪ್ರತ್ಯೇಕ ರಾಷ್ಟ್ರೀಯ ಭದ್ರತಾ ಕಾನೂನು ರೂಪಿಸಿಕೊಳ್ಳಬೇಕಿತ್ತು. 2003ರಲ್ಲಿ ಸ್ಥಳೀಯ ಸರ್ಕಾರ ಈ ಕಾನೂನಿನ ಜಾರಿಗಾಗಿ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸಿತು. ಅಂದಿನಿಂದ ಇಂದಿನವರೆಗೂ ಹೋರಾಟ ಮುಂದುವರಿದಿದೆ. ಆದರೆ, ಚೀನಾ ಸರ್ಕಾರ ತನಗೆ ಬೇಕಾದ ಭದ್ರತಾ ಕಾನೂನು ಹೇರಿದ್ದು, ಹಾಂಕಾಂಗ್ ಮೇಲೆ ತನ್ನ ಹಿಡಿತ ಹೆಚ್ಚಿಸಲು ಮುಂದಾಗಿರುವುದು ಇಲ್ಲಿನ ಪ್ರಜೆಗಳನ್ನು ಕೆರಳಿಸಿದೆ.

ಏನಿದು ಕಾನೂನು?: ‘ಹಾಂಕಾಂಗ್ ವಿಶೇಷ ಆಡಳಿತಾತ್ಮಕ ಪ್ರದೇಶದಲ್ಲಿ ರಾಷ್ಟ್ರೀಯ ಭದ್ರತೆ ಕಾಪಾಡುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕಾನೂನು’ ಎಂಬ ಹೆಸರಿನ ಕಾನೂನಿಗೆ ಕಳೆದ ಮಂಗಳವಾರ ಚೀನಾ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ. ಪ್ರತ್ಯೇಕತೆ, ವಿಧ್ವಂಸಕ, ಭಯೋತ್ಪಾದಕ ಚಟುವಟಿಕೆ, ವಿದೇಶ ಅಥವಾ ಬಾಹ್ಯ ಶಕ್ತಿಗಳೊಂದಿಗೆ ಬೆರೆತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳಿಗೆ ಕಠಿಣ ಶಿಕ್ಷೆ ವಿಧಿಸುವ ಅಂಶಗಳು ಈ ಕಾನೂನಿನಲ್ಲಿವೆ. ಈ ಎಲ್ಲಾ ಅಪರಾಧಗಳೂ ಜೀವಾವಧಿ ಶಿಕ್ಷೆಗೆ ಗುರಿಯಾಗಬಲ್ಲವು ಅಥವಾ ಕೃತ್ಯದ ತೀವ್ರತೆ ಆದರಿಸಿ ಶಿಕ್ಷೆ ತೀರ್ವನವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net