Kerala Domestic Violence: ಕೌಟುಂಬಿಕ ಕಲಹದ ವೇಳೆ ಪತ್ನಿ ಮೇಲೆ ಹಲ್ಲೆ ನಡೆಸಿ, ಸಾಕು ಪಿಟ್‌ಬುಲ್ ನಾಯಿಯಿಂದ ಕಚ್ಚಿಸಿದ ಆರೋಪದ ಮೇರೆಗೆ ಕೇರಳದ ಎರ್ನಾಕುಳಂ ಜಿಲ್ಲೆಯ ವರಪ್ಪುಳ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕರಿಂಗಂಥುರುತ್ ಬಳಿಯ ಆಲಂಗಾಡ್ ನಿವಾಸಿ ಸುನಿಲ್ ಬಂಧಿತ ಆರೋಪಿ. ಆತನ ಪತ್ನಿ ಶೈನಿ ದಾಖಲಿಸಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಸುನಿಲ್ ಕುಡಿದಾಗ ಮಾತ್ರವಲ್ಲದೆ, ಕುಡಿಯದಿದ್ದಾಗಲೂ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಶೈನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಜಗಳದಲ್ಲೂ ಮುಖಕ್ಕೆ ಹೊಡೆದಿರುವ ಆತ, ಮನೆಯ ಸಾಕು ಪಿಟ್‌ಬುಲ್ ನಾಯಿಯಿಂದ ದಾಳಿ ಮಾಡಿಸಿ ಶೈನಿಯನ್ನು ಗಾಯಗೊಳಿಸಿದ್ದಾನೆ.
ಈ ಭೀಕರ ಹಲ್ಲೆಯಿಂದ ಶೈನಿಯ ಮೂಗಿನ ಮೂಳೆ ಮುರಿದಿದೆ. ಬಳಿಕ ಪರವೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಅವರು, ನಾಯಿ ಕಡಿತಕ್ಕೂ ಚಿಕಿತ್ಸೆ ಹಾಗೂ ಲಸಿಕೆ ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸುನಿಲ್ ತನ್ನ ಮೊಬೈಲ್ ಫೋನ್ ಕಿತ್ತು ನೆಲಕ್ಕೆ ಎಸೆದು ಪುಡಿಮಾಡಿದ್ದಾನೆ ಎಂದೂ ಶೈನಿ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆ ಬಗ್ಗೆ ತನ್ನ ಸ್ನೇಹಿತರ ಬಳಿ ಹೇಳಿದ್ದಕ್ಕೆ ಕೋಪಗೊಂಡ ಸುನಿಲ್, ಮತ್ತೆ ಹಲ್ಲೆ ನಡೆಸಿದ್ದಾನೆ ಎಂದು ಶೈನಿ ದೂರಿದ್ದಾರೆ. ಚೆನ್ನೂರು ಮೂಲದ ಶೈನಿ, ಸುನಿಲ್ ಅವರನ್ನು ಎರಡನೇ ಮದುವೆಯಾಗಿದ್ದರು ಎಂದು ವರದಿಯಾಗಿದೆ.
ಶೈನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ವರಪ್ಪುಳ ಪೊಲೀಸರು ಆರೋಪಿ ಸುನಿಲ್‌ನನ್ನು ಬಂಧಿಸಿದ್ದಾರೆ. ಹಲ್ಲೆ ಹಾಗೂ ಸಾಕು ನಾಯಿಯಿಂದ ಉದ್ದೇಶಪೂರ್ವಕವಾಗಿ ಕಚ್ಚಿಸಿದ ಆರೋಪದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.