ಆಡಂಬರಕ್ಕೆ ಬ್ರೇಕ್, ಸರಳತೆಗೆ ಜೈ! 'ಜೆನ್​ ಜಿ' ಕನ್ನಡತಿ ವಧುಗಳ ಹೊಸ ಬ್ರೈಡಲ್ ಟ್ರೆಂಡ್ ಹೇಗಿದೆ ನೋಡಿ! | Gen Z Bridal Trends

Gen Z Bridal Trends
ಸಂಪ್ರದಾಯಕ್ಕೆ ಮಾಡರ್ನ್ ಟಚ್: ಮದುವೆ ಫ್ಯಾಷನ್‌ನಲ್ಲಿ ಹೊಸ ಅಲೆ ಎಬ್ಬಿಸಿದ ಇಂದಿನ ಕನ್ನಡದ ವಧುಗಳು
Published on: 

Gen Z Bridal Trends: ಮದುವೆ ಎಂದರೆ ಸಾಕು, ಭಾರೀ ರೇಷ್ಮೆ ಸೀರೆ, ಮೈತುಂಬಾ ಚಿನ್ನಾಭರಣ ಹಾಗೂ ಗಾಢವಾದ ಮೇಕಪ್ ಕಣ್ಣಮುಂದೆ ಬರುತ್ತದೆ. ಆದರೆ, ಇಂದಿನ ಜೆನ್ ಜಿ ಕನ್ನಡತಿ ವಧುಗಳ ಟ್ರೆಂಡ್ ಸಂಪೂರ್ಣ ಬದಲಾಗಿದೆ. ಸಂಪ್ರದಾಯದ ಸೊಗಡನ್ನು ಉಳಿಸಿಕೊಂಡೇ ಅದಕ್ಕೆ ಮಾಡರ್ನ್ ಟಚ್ ನೀಡುವ ಹೊಸ ಫ್ಯಾಷನ್ ಈಗ ಸಖತ್ ಸದ್ದು ಮಾಡುತ್ತಿದೆ. ಅತಿಯಾದ ಆಡಂಬರವನ್ನು ಬದಿಗಿಟ್ಟು, ಸಿಂಪಲ್ ಲುಕ್, ಆರಾಮದಾಯಕ ಉಡುಗೆ ಮತ್ತು ತಮ್ಮ ವ್ಯಕ್ತಿತ್ವಕ್ಕೆ ಒಪ್ಪುವ ಯೂನಿಕ್ ಸ್ಟೈಲ್‌ಗೆ ಇಂದಿನ ವಧುಗಳು ಜೈ ಎನ್ನುತ್ತಿದ್ದಾರೆ.

ಹಗುರವಾದ ಸೀರೆ, ತಿಳಿ ಬಣ್ಣಗಳದ್ದೇ ಕ್ರೇಜ್

ಹಿಂದೆ ಮದುವೆಗೆ ಭಾರವಾದ ಕಾಂಜೀವರಂ ಮತ್ತು ಮೈಸೂರು ರೇಷ್ಮೆ ಸೀರೆಗಳಿಗೆ ಹೆಚ್ಚು ಆದ್ಯತೆ ಇತ್ತು. ಈಗ ಸಾಫ್ಟ್ ಸಿಲ್ಕ್, ಟಿಶ್ಯೂ ಸಿಲ್ಕ್ ಮತ್ತು ಆರ್ಗನ್ಜಾ ಸೀರೆಗಳತ್ತ ವಧುಗಳ ಒಲವು ಹೆಚ್ಚಾಗಿದೆ. ಕೆಂಪು, ಹಳದಿ ಜತೆಗೆ ಐವರಿ, ತಿಳಿ ಗುಲಾಬಿ, ಪಿಸ್ತಾ ಹಸಿರು ಮತ್ತು ಲ್ಯಾವೆಂಡರ್ ಬಣ್ಣಗಳಿಗೂ ಬೇಡಿಕೆ ಇದೆ. ಬ್ಲೌಸ್‌ಗಳಲ್ಲಿ ಹೆಸರು, ಮದುವೆಯ ದಿನಾಂಕದ ಮೊದಲಕ್ಷರಗಳ ಕಸೂತಿ ಮಾಡಿಸುವುದು ಹೊಸ ಟ್ರೆಂಡ್. ಆರತಕ್ಷತೆ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಹಗುರವಾದ ಸೀರೆ, ಹೂವಿನ ವಿನ್ಯಾಸದ ಲೆಹೆಂಗಾ ಹಾಗೂ ವಿಶೇಷ ಶೂಗಳ ಆಯ್ಕೆಯೂ ಹೆಚ್ಚಾಗಿದೆ.

ಅಮ್ಮನ ಆಭರಣಕ್ಕೆ ಹೊಸ ರೂಪ

ಆಭರಣಗಳ ವಿಚಾರದಲ್ಲೂ ವಧುಗಳ ಆಯ್ಕೆ ಬದಲಾಗಿದೆ. ಕುತ್ತಿಗೆ ತುಂಬಾ ಭಾರವಾದ ಚಿನ್ನದ ಸರ ಧರಿಸುವ ಬದಲು, ಆಕರ್ಷಕ ಚೋಕರ್ ಅಥವಾ ಉದ್ದನೆಯ ಕಾಸಿನ ಸರ ಧರಿಸಲು ಇಷ್ಟಪಡುತ್ತಿದ್ದಾರೆ. ಅಮ್ಮ ಅಥವಾ ಅಜ್ಜಿಯ ಕಾಲದ ಹಳೆಯ ಚಿನ್ನದ ಆಭರಣಗಳನ್ನು ಹೊಸ ಉಡುಪಿನೊಂದಿಗೆ ಹೊಂದಿಸಿಕೊಂಡು ಧರಿಸುವುದಕ್ಕೂ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಚಿನ್ನದ ಜೊತೆಗೆ ಮುತ್ತು ಮತ್ತು ಪಚ್ಚೆ ಹರಳುಗಳ ಆಭರಣಗಳೂ ವಧುಗಳ ಗಮನ ಸೆಳೆಯುತ್ತಿವೆ.

ನೈಸರ್ಗಿಕ ಮೇಕಪ್, ಹೂವಿನ ಜಡೆಗೆ ಆದ್ಯತೆ

ಮೇಕಪ್ ವಿಚಾರದಲ್ಲೂ ಹೊಸ ಬದಲಾವಣೆ ಕಾಣುತ್ತಿದೆ. ಮುಖದ ನೈಸರ್ಗಿಕ ಕಾಂತಿ ಎದ್ದು ಕಾಣುವಂತೆ ಮಾಡುವ ಸರಳ ಮೇಕಪ್‌ಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಗಾಢವಾದ ಕೆಂಪು ಬಣ್ಣದ ಲಿಪ್‌ಸ್ಟಿಕ್ ಬದಲು ತಿಳಿ ಗುಲಾಬಿ, ಪೀಚ್ ಮತ್ತು ನ್ಯೂಡ್ ಬಣ್ಣಗಳು ಇಷ್ಟವಾಗುತ್ತಿವೆ.

ಮೆಹಂದಿಯಲ್ಲೂ ಸರಳತೆ

ಮೆಹಂದಿಯಲ್ಲೂ ದಟ್ಟವಾದ ವಿನ್ಯಾಸಗಳ ಬದಲು ಸಣ್ಣ ಹೂವಿನ ಚಿತ್ರಗಳು ಮತ್ತು ಮಂಡಲ ವಿನ್ಯಾಸಗಳು ಜನಪ್ರಿಯವಾಗಿವೆ. ಕೇಶವಿನ್ಯಾಸಕ್ಕೆ ತಾಜಾ ಮಲ್ಲಿಗೆ, ಗುಲಾಬಿ, ಕನಕಾಂಬರ ಹೂವುಗಳನ್ನು ಬಳಸುವುದರ ಜತೆಗೆ ಹೂವಿನ ಅಲಂಕಾರದ ಜಡೆ ಮತ್ತು ಸರಳವಾದ ಬನ್‌ಗಳಿಗೂ ಬೇಡಿಕೆ ಇದೆ.

WEB

ಮದುವೆಯ ಸಂಭ್ರಮದಲ್ಲೂ ಹೊಸ ಪ್ರಯೋಗ

ಮದುವೆಯ ಶಾಸ್ತ್ರಗಳಲ್ಲೂ ಹೊಸ ಟ್ರೆಂಡ್ ಶುರುವಾಗಿದೆ. ಅರಿಶಿನ ಶಾಸ್ತ್ರದ ಜೊತೆಗೆ ಗುಲಾಬಿ ಹೂವಿನ ಅಲಂಕಾರ, ಹೂವಿನ ಮಳೆ ಸುರಿಸುವ ಸಂಭ್ರಮಕ್ಕೂ ಮನ್ನಣೆ ಸಿಗುತ್ತಿದೆ. ಮದುವೆಯಲ್ಲಿ ಸಂಗೀತ ಕಾರ್ಯಕ್ರಮ, ಸಹಜ ಕ್ಷಣಗಳನ್ನು ಸೆರೆಹಿಡಿಯುವ ಛಾಯಾಗ್ರಹಣ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ವಿಶೇಷ ವಿಡಿಯೋ ಮಾಡಿಸುವ ಕ್ರೇಜ್ ಕೂಡ ಹೆಚ್ಚಾಗಿದೆ.

WEB

ಆಡಂಬರದ ಮದುವೆಗೆ ಬ್ರೇಕ್‌

ಸಾವಿರಾರು ಜನರನ್ನು ಆಹ್ವಾನಿಸುವ ಬದಲು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗುವ ಆಸಕ್ತಿ ಹೆಚ್ಚುತ್ತಿದೆ. ಹೆಚ್ಚು ಖರ್ಚು ಮಾಡದೆ, ಆಡಂಬರಕ್ಕೆ ಆದ್ಯತೆ ನೀಡದೆ ಚಿಕ್ಕಮಗಳೂರು, ಕೊಡಗು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ರೆಸಾರ್ಟ್‌ಗಳಲ್ಲಿ ಮದುವೆ ಆಯೋಜಿಸುವುದು ಈಗಿನ ಹೊಸ ಟ್ರೆಂಡ್ ಆಗಿದೆ.

WEB

ಇದನ್ನೂ ಓದಿ: ರಣರಂಗವಾದ ಕ್ರಿಕೆಟ್ ಕ್ರೀಡಾಂಗಣ! ಆನೇಕಲ್‌ನಲ್ಲಿ ಬ್ಯಾಟ್, ವಿಕೆಟ್ ಹಿಡಿದು ಸಿನಿ ಸ್ಟೈಲ್ ಫೈಟ್ | Anekal Cricket Clash

ಇಂದಿನ ಮಾಡರ್ನ್ ಕನ್ನಡದ ವಧುಗಳು ಭಾರೀ ಅಲಂಕಾರ ಬದಿಗಿಟ್ಟು, ಸಿಂಪಲ್ ಉಡುಪು, ಆರಾಮದಾಯಕ ಆಭರಣ ಹಾಗೂ ನ್ಯಾಚುರಲ್ ಲುಕ್ ಮೂಲಕ ತಮ್ಮ ಮದುವೆಯ ದಿನವನ್ನು ಡಿಫರೆಂಟ್ ಆಗಿ ಆನಂದಿಸಲು ಹೊಸ ತಲೆಮಾರಿನ ವಧುಗಳು ಸಿದ್ಧರಾಗುತ್ತಿದ್ದಾರೆ.