

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ 32 ವರ್ಷದ ಯೋಧರೊಬ್ಬರು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್) ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಸೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಲ್ಗಾಮ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸ್ಫೋಟ ಸಂಬಂಧ ತಜ್ಞರ ತಂಡ ಹಾಗೂ ಭದ್ರತಾ ಸಿಬ್ಬಂದಿಯ ತಂಡವು ಮತಗಟ್ಟೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಲ್ಲಿ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಪ್ರದೇಶವು ಬಿಜಾಪುರ ಜಿಲ್ಲೆಯು ಬಸ್ತಾರ್ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ.
ಮೃತ ಸೈನಿಕನನ್ನು ಸಿಆರ್‌ಪಿಎಫ್‌ನ 196ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ದೇವೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಜಗದಲ್‌ಪುರದ ವೈದಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೈ ಆತ ಬದುಕುಳಿಯಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೃತ ಸೈನಿಕ ದೇವೇಂದ್ರ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಶನಿವಾರ ಬಸ್ತಾರ್ ಜಿಲ್ಲೆಯ ಅವರ ಹುಟ್ಟೂರಾದ ಧೋಬಿಗುಡಾ ಗ್ರಾಮದಲ್ಲಿ ನಡೆಸಲಾಗುವುದು. ಗಲ್ಗಾಮ್ ಗ್ರಾಮದ ಬಳಿ ಸಂಭವಿಸಿದ ಸ್ಫೋಟದ ತನಿಖೆಗಾಗಿ ತಜ್ಞರ ತಂಡವನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
( ಏಜೆನ್ಸೀಸ್)