ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ದಾಳಿ; ಓರ್ವ ಯೋಧ ಹುತಾತ್ಮ, ಮೂವರಿಗೆ ಗಾಯ

Untitled-design-2024-07-14T163024.059
Published on

ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಸಿಆರ್‌ಪಿಎಫ್ ಯೋಧ ಮತ್ತು ಇಬ್ಬರು ರಾಜ್ಯ ಪೊಲೀಸ್ ಕಮಾಂಡೋಗಳಿಗೆ ಗಾಯಗಳಾಗಿವೆ.

ಸಿಆರ್‌ಪಿಎಫ್ ಮತ್ತು ಜಿರಿಬಾಮ್ ಜಿಲ್ಲಾ ಪೊಲೀಸರ 20 ಬೆಟಾಲಿಯನ್‌ಗಳ ಜಂಟಿ ತಂಡವು ಏಕಕಾಲದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಇದೇ ವೇಳೆ ಜಂಟಿ ತಂಡದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯಿಂದಾಗಿ ಸುಮಾರು ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಬುಲೆಟ್ ಗಾಯಗೊಂಡ ಒಬ್ಬ ಸಿಆರ್‌ಪಿಎಫ್ ಯೋಧ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುಲೈ 13ರಂದು ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸಲು ಜಂಟಿ ಭದ್ರತಾ ತಂಡವು ಜಿರಿಬಾಮ್ ಜಿಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊನ್‌ಬಂಗ್ ಗ್ರಾಮದ ಬಳಿ ಹೋಗುತ್ತಿತ್ತು ಎಂದು ಪೊಲೀಸ್ ವರದಿಯು ತಿಳಿಸಿದೆ. ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧನನ್ನು ಬಿಹಾರದ ನಿವಾಸಿ ಅಜಯ್ ಕುಮಾರ್ ಝಾ (43) ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾ​​ಣದಲ್ಲಿ ಸಿಆರ್​ಪಿಎಫ್​​​ ಯೋಧನ ಸಾವಿಗೆ ಸಂತಾಪ ಸೂಚಿಸಿರುವ ಮಣಿಪುರ ಸಿಎಂ ಎನ್​. ಬಿರೇನ್​ ಸಿಂಗ್ ಯೋಧನ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ಮಣಿಪುರ ರಾಜ್ಯದಲ್ಲಿ ಬಹುಸಂಖ್ಯಾತ ಮೈತೇಯಿ ಮತ್ತು ಅಲ್ಪಸಂಖ್ಯಾತ ಬುಡಕಟ್ಟು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರ ಮತ್ತೊಮ್ಮೆ ಭುಗಿಲೆದ್ದಿದೆ. ಇದೀಗ ಸಿಆರ್‌ಪಿಎಫ್ ಯೋಧರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಎರಡು ಸಮಯದಾಯಗಳ ದೀರ್ಘಕಾಲದ ಸಂಘರ್ಷದಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ ಮತ್ತು 67,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. (ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net