

ಕಿರುವಾರ ಎಸ್. ಸುದರ್ಶನ್ ಕೋಲಾರ
ಶೈಕ್ಷಣಿಕ ವರ್ಷದ ತರಗತಿಗಳು ಇದೇ 29ರಿಂದ ಪ್ರಾರಂಭವಾಗಲಿದ್ದು, ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಈಗಾಗಲೇ ಕ್ರಮಕೈಗೊಂಡಿದೆ. ಆದರೆ ತಾಲೂಕು ಕೇಂದ್ರದಿಂದ
ಶಾಲೆಗಳಿಗೆ ಪುಸ್ತಕ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಕ್ಲಸ್ಟರ್ಮಟ್ಟದ ಸಂಪನ್ಮೂಲ ವ್ಯಕ್ತಿ (ಸಿಆರ್ಪಿ) ಹಾಗೂ ಶಾಲೆಗಳು ಮುಖ್ಯ ಶಿಕ್ಷಕರಿಗೆ ನೀಡಿದ್ದು, ಇದು ಶಿಕ್ಷಕರು, ಸಿಆರ್ಪಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತಿ ವರ್ಷವು ತಾಲೂಕು ಕೇಂದ್ರದಿಂದ ಶಾಲೆಗೆ ಪುಸ್ತಕಗಳನ್ನು ಪೂರೈಕೆ ಮಾಡಲು ಸರ್ಕಾರದಿಂದ ಸರಬರಾಜು ವೆಚ್ಚ ಬಿಡುಗಡೆಯಾಗುತ್ತದೆ. ಕಳೆದ ವರ್ಷಗಳಲ್ಲಿ ಒಂದು ಕಿಮೀಗೆ 1.50 ರೂ. ಮಾತ್ರ ನೀಡಲಾಗುತ್ತಿತ್ತು, ಈ ಬಾರಿ ಅದನ್ನು ಪರಿಷ್ಕರಿಸಿ 2.50 ರೂ.ಗೆ ಏರಿಕೆ ಮಾಡಲಾಗಿದೆ. ಮಕ್ಕಳಿಗೆ ಸೌಲಭ್ಯಗಳ ವಿತರಣೆಯಲ್ಲಿ ಯಾವುದೇ ಕೊರತೆಯಾಗದಂತೆ, ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಬೇಕು ಹಾಗೂ ಸರ್ಕಾರದಿಂದ ಜಾರಿಗೆ ತರುವ ಯೋಜನೆಗಳ ಪ್ರಯೋಜನ ಮಕ್ಕಳಿಗೆ ತಲುಪಿಸುವಂತೆ ಸರ್ಕಾರವೂ ಇಲಾಖಾಧಿಕಾರಿಗಳಿಗೆ ಸೂಚಿಸಿದರೆ, ಇದರ ಹೊಣೆಗಾರಿಕೆಯನ್ನು ಅಧಿಕಾರಿಗಳು ಶಿಕ್ಷಕರ ಹೆಗಲಿಗೆ ಹಾಕಿರುವುದಕ್ಕೆ ಅಪಸ್ವರ ಕೇಳಿಬಂದಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಂದ ಬೇಡಿಕೆ ಪಡೆದು ಇಲಾಖೆಯ (ಸ್ಟಾ$ಟ್ಸ್) ತಂತ್ರಾಂಶದಲ್ಲಿ ದಾಖಲು ಮಾಡಬೇಕು. ಅದನ್ನು ಸಿಆರ್ಪಿ, ಬಿಇಒ ಹಾಗೂ ಡಿಡಿಪಿಐ ಅವರು ಪರಿಶೀಲಿಸಿ ಇಲಾಖೆಗೆ ಕಳುಹಿಸಿಕೊಡುತ್ತಾರೆ. ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹಿಂದಿನ ಆರ್ಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ.
ಪಠ್ಯಪುಸ್ತಕಗಳ ಮುದ್ರಣವನ್ನು ಪ್ರಾರಂಭಿಸುವ ಮುನ್ನ ಸರ್ಕಾರಿ ಶಾಲೆಗಳಲ್ಲಿ, ಅನುದಾನಿತ ಶಾಲೆಗಳಲ್ಲಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತರಗತಿಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ-ಅಂಶಗಳನ್ನು ಉಪನಿರ್ದೇಶಕರ ಮೂಲಕ ಪಡೆಯಲಾಗುತ್ತದೆ. ಇದರ ಪ್ರಕಾರ ಪಠ್ಯಪುಸ್ತಕ ಮುದ್ರಿಸಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿಸುವ ಕೆಲಸ ಕರ್ನಾಟಕ ಪಠ್ಯ ಪುಸ್ತಕ ಸಂ ಮಾಡುತ್ತದೆ.
ರಾಜ್ಯದಿಂದ ನೇರವಾಗಿ ಜಿಲ್ಲೆ ಹಾಗೂ ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗೆ ಪಠ್ಯ ಪುಸ್ತಕ ಕಳುಹಿಸಿಕೊಡಲಾಗುತ್ತದೆ. ತಾಲೂಕು ಕೇಂದ್ರಗಳಿಂದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಶೇ.100 ಹಣ ಪಾವತಿಸಿದ ನಂತರ ಖಾಸಗಿ ಶಾಲೆಗಳಿಗೆ ಪುಸ್ತಕ ವಿತರಿಸಲು ಕರ್ನಾಟಕ ಪಠ್ಯ ಪುಸ್ತಕ ಸಂದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಸರಬರಾಜು ಮಾಡಬೇಕು. ಈ ವಿಚಾರದಲ್ಲಿ ವಿಳಂಬ ಮಾಡಿದರೆ ಆಯಾ ಜಿಲ್ಲೆಯ ಡಿಡಿಪಿ, ಬಿಇಒ ಅವರನ್ನು ಹೊಣೆ ಮಾಡಲಾಗುತ್ತದೆ. ಶಾಲೆಗಳ ಪ್ರಾರಂಭದೊಳಗೆ ಪ್ರತಿ ಶಾಲೆಗೆ ಪುಸ್ತಕಗಳನ್ನು ತಲುಪಿಸಬೇಕು.- ಬಿ.ಬಿ.ಕಾವೇರಿ, ರಾಜ್ಯ ಆಯುಕ್ತರು, ಶಿಕ್ಷಣ ಇಲಾಖೆ