ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ತುಂಬಿ ತುಳುಕಿದ ಪ್ರಯಾಣಿಕರು

metro
Published on

ಬೆಂಗಳೂರು: ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಕಿ.ಮೀ ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಮೆಟ್ರೋ ಪ್ರವೇಶಿಸಿ ಪ್ರಯಾಣಿಸಿದ ದೃಶ್ಯ ಸೋಮವಾರ ಕಂಡು ಬಂದಿತ್ತು. ನಾಗಸಂದ್ರದ ಮೆಟ್ರೋ ನಿಲ್ದಾಣ ಜನರಿಂದ ತುಂಬಿ ತುಳುಕುತ್ತಿತ್ತು.

ದೀಪಾವಳಿ ಹಬ್ಬಕ್ಕೆ ಊರುಗಳಿಗೆ ಹೋಗಿದ್ದ ಜನರು ಸೋಮವಾರ ನಗರಕ್ಕೆ ಹಿಂತಿರುಗಿದ್ದಾಗ ಟ್ರಾಫಿಕ್ ಜಾಮ್‌ನಿಂದ ಪಾರಾಗಲು ನಮ್ಮ ಮೆಟ್ರೋ ಮೊರೆ ಹೋಗಿದ್ದರು. ಇದರಿಂದ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸುಮಾರು ೧ ಕಿ.ಮೀ ಉದ್ದದ ಸರತಿ ಸಾಲುಗಳಲ್ಲಿ ಪ್ರಯಾಣಿಕರು ನಿಂತಿರುವುದು ಕಂಡುಬಂದಿತ್ತು. ಮತ್ತೊಂದೆಡೆ ಮೆಟ್ರೋ ಮಾರ್ಗ ವಿಸ್ತರಣೆ ಮಾಡದ ರಾಜಕಾರಣಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ೨೨ಕ್ಕೂ ಅಧಿಕ ಉತ್ತರ ಭಾಗದ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಕಾರು, ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದ ಜನರು ನಗರದ ಸಂಚಾರ ದಟ್ಟಣೆಗೆ ಹೆದರಿಕೊಂಡು ಮೆಟ್ರೋ ರೈಲಿನಲ್ಲಿ ಹೋಗಲು ಮುಂದಾಗಿದ್ದರು. ನಗರ ಪ್ರವೇಶ ಆಗುತ್ತಿದ್ದಂತೆ ನಾಗಸಂದ್ರ, ಪೀಣ್ಯ ೨ನೇ ಹಂತ, ಗೊರಗುಂಟೆಪಾಳ್ಯ, ಯಶವಂತಪುರ ಸೇರಿದಂತೆ ವಿವಿಧೆಡೆ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಿಂದಾಗಿ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ಹೋದರೆ ಹೆಚ್ಚು ಸಮಯ ಆಗಲಿದೆ ಎಂದು ಮೆಟ್ರೋ ಮೊರೆ ಹೋಗಿದ್ದರು. ಹೀಗಾಗಿ ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ನಾಗಸಂದ್ರದ ಹಸಿರು ಮಾರ್ಗದ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು.

೧ ಕಿಮೀ ಸರತಿ ಸಾಲು:

ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ೫ ರಿಂದ ೧೦ ಸಾವಿರ ಜನರು ಮೆಟ್ರೋ ರೈಲು ಪ್ರಯಾಣಕ್ಕೆ ಹೊರಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸರತಿ ಸಾಲಿನ ಉದ್ದ ಹನುಮಂತನ ಬಾಲದಂತೆ ಸುಮಾರು ೧ ಕಿ.ಮೀ ಉದ್ದವಾಗಿತ್ತು. ಟ್ರಾಫಿಕ್ ರಹಿತ ಸಂಚಾರಕ್ಕೆ ಮೆಟ್ರೋ ಮೊರೆ ಹೋದ ಜನರಿಗೆ ಇಲ್ಲಿಯೂ ಕಾಯುವುದು ತಪ್ಪಲಿಲ್ಲ ಎಂಬ ಭಾರೀ ಬೇಸರ ಉಂಟಾಗಿತ್ತು. ಹೀಗಾಗಿ, ಮೆಟ್ರೋ ರೈಲು ಸಂಚಾರಕ್ಕೆ ಅನುಕೂಲ ಆಗುವಂತೆ ಇನ್ನೂ ಮೂರು ನಿಲ್ದಾಣಗಳನ್ನು ವಿಸ್ತರಣೆ ಮಾಡದ ರಾಜಕಾರಣಿಗಳು ಹಾಗೂ ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net