ಜೆಡಿಎಸ್​ಗೆ ಮತ್ತೆ ಕಾಡುತ್ತಿದೆ ಅಡ್ಡ ಮತದಾನ ಆತಂಕ

JDS-BJP_CONGRESS LOGO
Published on

ಬೆಂಗಳೂರು: ರಾಜ್ಯಸಭೆ ಮೂಲಕವಾದರೂ ದೇವೇಗೌಡರನ್ನು ಸಂಸತ್​ಗೆ ಕಳುಹಿಸಬೇಕೆಂದು ಕಸರತ್ತು ನಡೆಸುತ್ತಿರುವ ಜೆಡಿಎಸ್​ಗೆ ಇದೀಗ ಅಡ್ಡಮತದಾನದ ಭೀತಿ ಕಾಡುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮೇಲ್ನೋಟಕ್ಕೆ ನಾನು ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಹೇಳುತ್ತಿದ್ದರೂ, ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 68 ಸದಸ್ಯ ಬಲವಿದ್ದರೆ, ಜೆಡಿಎಸ್ 34 ಸದಸ್ಯ ಬಲ ಹೊಂದಿವೆ. ಕಾಂಗ್ರೆಸ್ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಹೆಚ್ಚುವರಿಯಾಗಿ 22 ಮತಗಳು ಉಳಿಯುತ್ತವೆ. ಈ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಜತೆ ಮೈತ್ರಿ ಸಾಧಿಸಲು ಜೆಡಿಎಸ್ ತುದಿಗಾಲಲ್ಲಿ ನಿಂತಿದೆ.

ಬಿಜೆಪಿ 3ನೇ ಅಭ್ಯರ್ಥಿ ಭಯ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಕೊಟ್ಟರೆ, ಪ್ರತಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವ ಷರತ್ತು ವಿಧಿಸಲಿದೆ. ಆದರೆ ಈ ಕೊಡುಕೊಳ್ಳುವಿಕೆ ನಡುವೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ‘ಕುದುರೆ ವ್ಯಾಪಾರ’ಕ್ಕಿಳಿದರೆ ಹೇಗೆ ಎಂಬ ದುಗುಡ ದೇವೇಗೌಡರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಮನವೊಲಿಸಲು ದೇವೇಗೌಡರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ತುಮಕೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ಸಿಗರಿಂದ ಒಳಪೆಟ್ಟು ತಿಂದಿರುವ ದೇವೇಗೌಡರಿಗೆ ಕಾಂಗ್ರೆಸ್ ಶಾಸಕರು ಮತ ಚಲಾಯಿಸುವ ಬಗ್ಗೆ ಸಣ್ಣ ಅನುಮಾನವಂತೂ ಇದ್ದೇ ಇದೆ.

ಕುಮಾರಸ್ವಾಮಿ ವಿರುದ್ಧ ಮುನಿಸು

ಮಾಜಿ ಸಿಎಂ ಕುಮಾರಸ್ವಾಮಿ ಮೇಲಿನ ಮುನಿಸಿನಿಂದ ಈಗಾಗಲೆ 10-15 ಶಾಸಕರು ಜೆಡಿಎಸ್ ವರಿಷ್ಠರಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸೇರಿ ‘ಬೇಡಿಕೆ’ ಈಡೇರಿಸುವ ಭರವಸೆ ಸಿಕ್ಕರೆ ಬಿಜೆಪಿ ಅಭ್ಯರ್ಥಿ ಬೆಂಬಲಿಸಲು ರೆಡಿ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಇದು ಈಗ ಜೆಡಿಎಸ್​ಗೆ ಬಿಸಿ ತುಪ್ಪವಾಗಿದೆ. 2016ರ ಜೂನ್​ನಲ್ಲಿ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಆಗ ಜೆಡಿಎಸ್​ನಲ್ಲಿದ್ದ 8 ಶಾಸಕರು ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ್ದರು. ಈ ಕಹಿ ಅನುಭವ ಜೆಡಿಎಸ್ ವರಿಷ್ಠರಿಗಿದೆ. ಹಾಗಾಗಿ ಎಚ್ಚರಿಕೆಯ ಹೆಜ್ಜೆ ಇಡಲು ಜೆಡಿಎಸ್ ನಿರ್ಧರಿಸಿದೆ.

ಇಕ್ಕಟ್ಟಿಗೆ ಸಿಲುಕಿದ ಯಡಿಯೂರಪ್ಪ

ರಾಜ್ಯಸಭೆಗೆ ಬಿಜೆಪಿಯಿಂದ ಇಬ್ಬರ ಆಯ್ಕೆಗೆ ಹಾದಿ ಸುಗಮವಾಗಿದ್ದರೂ ಟಿಕೆಟ್ ವಿಚಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕಠಿಣ ಸವಾಲಾಗಿದೆ. ಒಂದು ಟಿಕೆಟ್​ಗೆ ಉಮೇಶ್ ಕತ್ತಿ ಹಾಗೂ ಡಾ.ಪ್ರಭಾಕರ ಕೋರೆ ನಡುವೆ ಪೈಪೋಟಿ ಇದೆ. ಇಬ್ಬರೂ ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದು, ಒಬ್ಬರಿಗೆ ಮಾತ್ರವೇ ಟಿಕೆಟ್ ನೀಡಬಹುದು. ಉಮೇಶ್ ಕತ್ತಿ ಅವರನ್ನು ಮುಂದೆ ಸಚಿವರನ್ನಾಗಿ ಮಾಡಲು ಒಪ್ಪಿಗೆ ನೀಡಿದರೆ, ಪ್ರಭಾಕರ ಕೋರೆ ಅವರಿಗೆ ರಾಜ್ಯಸಭೆ ಟಿಕೆಟ್ ಕೊಡಿಸಬಹುದು. ಇಲ್ಲದಿದ್ದರೆ, ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡಿ, ಮುಂದೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಷರಾ ಎಳೆದು ಬಿಡಬಹುದು ಎನ್ನುವುದು ಬಿಎಸ್​ವೈ ಲೆಕ್ಕಾಚಾರ. ಮತ್ತೊಂದು ಟಿಕೆಟ್ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಕೊಡಿಸುವುದೋ ಅಥವಾ ಮುರಳೀಧರ ರಾವ್ ಅವರಿಗೆ ಕೊಡಿಸುವುದೋ ಎನ್ನುವುದು ಕೂಡ ಸಿಎಂ ಬಿಎಸ್​ವೈಗೆ ತಲೆನೋವು ತಂದಿದೆ. ಸಂಕಷ್ಟ ಸಂದರ್ಭದಲ್ಲಿ ತಮ್ಮ ಜೊತೆಗೆ ಪಕ್ಷದ ಸಾಥ್ ನೀಡಿರುವ ಮುರಳೀಧರ ರಾವ್ ಅವರಿಗೆ ಬೇರೆ ಎಲ್ಲಿಯೂ ಅವಕಾಶಗಳಿಲ್ಲ. ಆದ್ದರಿಂದ ರಾಜ್ಯಸಭೆಯಲ್ಲಿಯೇ ಟಿಕೆಟ್ ನೀಡಬೇಕು ಎನ್ನುವ ಒತ್ತಾಯಗಳಿವೆ. ಆದರೆ, ಪಕ್ಷ ಸಂಘಟನೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಅನಂತಕುಮಾರ್ ಪತ್ನಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಆಗಿಲ್ಲ. ಈ ಮೂಲಕ ನ್ಯಾಯ ಒದಗಿಸಬೇಕು ಎನ್ನುವ ಲೆಕ್ಕಾಚಾರಗಳಿವೆ. ಎಲ್ಲವನ್ನು ವರಿಷ್ಠರೊಂದಿಗೆ ಚರ್ಚೆ ಮಾಡಿ ನಿರ್ಧರಿಸಲು ಸಿಎಂ ತೀರ್ವನಿಸಿದ್ದಾರೆ.

ಅಭಿಪ್ರಾಯ ಸಂಗ್ರಹಕ್ಕೆ ಸಭೆ

ರಾಜ್ಯಸಭೆಗೆ ಕರ್ನಾಟಕದಿಂದ ಯಾರನ್ನು ಕಳಿಸಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಜೂ. 5ರಂದು ಮಹತ್ವದ ಸಭೆ ನಡೆಸಲಿದೆ. ಪಸ್ತುತ ವಿಧಾನಸಭೆ ಬಲಾಬಲದಂತೆ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರವನ್ನು ಗೆಲ್ಲಲು ಸಾಧ್ಯವಿದೆ. ಈ ಹಿನ್ನೆಲೆ ಯಲ್ಲಿ ಪಕ್ಷದ ಹೈಕಮಾಂಡ್ ಅಭಿಪ್ರಾಯ ಸಂಗ್ರಹಕ್ಕಿಳಿದು, ಪ್ರಮುಖ ನಾಯಕರ ಮನದಿಂಗಿತವನ್ನು ಗ್ರಹಿಸಲಾರಂಭಿಸಿದೆ. ಲೋಕಸಭೆಯಲ್ಲಿ ಸೋಲುಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಕೊಡಬೇಕೆಂಬ ವಾದವೊಂದಿದೆ. ಜತೆಗೆ ಲೋಕಸಭಾ ಚುನಾವಣೆಯಲ್ಲಿ ಅಂದಿನ ಮೈತ್ರಿ ಪಕ್ಷಕ್ಕೆ ತಮ್ಮ ಸ್ಥಾನ ಬಿಟ್ಟುಕೊಟ್ಟ ಮುದ್ದಹನುಮೇಗೌಡ, ಈ ಹಿಂದೆ ರಾಜ್ಯಸಭೆ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ್, ರಾಜೀವ್ ಗೌಡ ಅವರ ನಡುವೆ ಪೈಪೋಟಿ ಇದೆ. ನಾಮಪತ್ರ ಸಲ್ಲಿಸಲು ಜೂನ್ 9 ಕಡೆಯ ದಿನವಾಗಿದ್ದು, ಒಮ್ಮತದ ನಿರ್ಧಾರ ಕೈಗೊಳ್ಳಲು ಒಂದು ವಾರ ಮಾತ್ರ ಬಾಕಿ ಇದೆ.

ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಪಕ್ಷದ ವರಿಷ್ಠರು ಒಟ್ಟಾರೆ ನಿರ್ಣಯ ಆಧರಿಸಿ ಆಯ್ಕೆ ಮಾಡುತ್ತಾರೆ. ಕೆಲವರು ಅಪೇಕ್ಷೆ ವ್ಯಕ್ತಪಡಿಸಿದ್ದು ತಪ್ಪೇನಲ್ಲ. ನಿಷ್ಠೆಯಿಂದ ಸೇವೆ ಸಲ್ಲಿಸುವವರನ್ನು ಪಕ್ಷವೇ ಗುರುತಿಸುತ್ತದೆ.

| ಅಶ್ವತ್ಥ ನಾರಾಯಣ ಉಪ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net