

ಚಿಕ್ಕಮಗಳೂರು: ಬಾಕಿ ಬಿಲ್ ಪಾವತಿ, ತೆರಿಗೆ ವಸೂಲಿ, ನಲ್ಲಿ ನೀರಿನ ಸಂಪರ್ಕ, ಯುಜಿಡಿ, ಚಿಕ್ಕಮಗಳೂರು ಹಬ್ಬಕ್ಕೆ ವಿದ್ಯುತ್ ಅಲಂಕಾರದ ಬಿಲ್ ಪಾವತಿ, ಅಮೃತ್ ಯೋಜನೆ ಕಾಮಗಾರಿ ಪೂರ್ಣವಾಗದೆಯೇ ನಗರಸಭೆ ಸುಪರ್ದಿಗೆ ಪಡೆದಿರುವುದು, ಯುಜಿಡಿ ಸಂಪರ್ಕ, ಬೀದಿದೀಪ, ಟ್ರೇಡ್ ಲೈಸೆನ್ಸ್ ಶುಲ್ಕ, ನೀರು, ಅದಾಯ ತೆರಿಗೆ ವಿಚಾರಗಳ ಬಗ್ಗೆ ಮಂಗಳವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯಾಯಿತು.
ಚಿಕ್ಕಮಗಳೂರು ಉತ್ಸವ ಆಚರಣೆಗೆ ಹಾಸನ ಮೂಲದ ಗುತ್ತಿಗೆದಾರನಿಗೆ ವಿದ್ಯುತ್ ಅಲಂಕಾರದ ಜವಾಬ್ದಾರಿ ನೀಡಲಾಗಿತ್ತು. ಅಲಂಕಾರಕ್ಕೆ ವೆೆಚ್ಚವಾಗಿರುವ ಅನುದಾನ ಬಿಡುಗಡೆ ಮಾಡುವ ವಿಷಯ ಚರ್ಚೆಗೆ ಬಂದಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಲಕ್ಷ್ಮಣ್, ಕುಮಾರ್, ಉತ್ಸವವು ನಗರಸಭೆ ಸಹಯೋಗದಲ್ಲಿ ನಡೆದಿಲ್ಲ. ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ನೀವೇ ಹೇಳಿದ್ದೀರಿ, ಈಗ ಲಕ್ಷ ಲಕ್ಷ ಹಣ ನಗರಸಭೆಯಿಂದ ಯಾಕೆ ಪಾವತಿಸಬೇಕು ಎಂದು ಪ್ರಶ್ನಿಸಿದರು.
ಅಧ್ಯಕ್ಷ ವರಿಸಿದ್ಧಿ ವೇಣುಗೋಪಾಲ್ ಮಾತನಾಡಿ, ಉತ್ಸವವನ್ನು ಸರ್ಕಾರದಿಂದ ಆಚರಿಸಲಾಗಿದೆ. ವಿದ್ಯುತ್ ದೀಪ ಅಲಂಕಾರಕ್ಕೆ ಆಗಿರುವ ವೆಚ್ಚವನ್ನು ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಾವತಿಸುವಂತೆ ಜಿಲ್ಲಾಡಳಿತದಿಂದ ಪತ್ರ ಬಂದಿದೆ. ಆ ವಿಷಯವನ್ನು ಸಭೆಗೆ ಇಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಾದರೆ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಿರುವ ವೆಚ್ಚವನ್ನು ನಗರಸಭೆಯಿಂದ ಯಾಕೆ ಭರಿಸಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಗೃಹಲಕ್ಷ್ಮಿ ಯೋಜನೆಯಿಂದ ಜನತೆಗೆ ಅನುಕೂಲವಾಗಿದೆ. ಉತ್ಸವದಿಂದ ಯಾರಿಗೆ ಅನುಕೂಲವಾಗಿದೆ ಹೇಳಿ ಎಂದು ಪ್ರಶ್ನಿಸಿದರು.
ಬಡವರ ಜೇಬಿಕೆ ಕೈ ಹಾಕಬೇಡಿ: ಟ್ರೇಡ್ ಲೈಸೆನ್ಸ್ ನೀಡಲು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ವಾಣಿಜ್ಯ ಮಳಿಗೆಗಳ ಮಾಲೀಕರು ಗಮನಕ್ಕೆ ತಂದಿದ್ದಾರೆ. ನಗರದಲ್ಲಿ ಎಂ.ಜಿ ರಸ್ತೆ, ಐ.ಜಿ ರಸ್ತೆ, ಬೈಪಾಸ್ ರಸ್ತೆಗಳಲ್ಲಿ ಫ್ಯಾನ್ಸಿ, ಜನರಲ್ ಸ್ಟೋರ್, ಗ್ಯಾರೇಜ್, ಕಾಫಿ ಶಾಪ್, ಶೋ ರೂಂಗಳು, ಕ್ಷೌರಿಕ ಅಂಗಡಿಗಳು ಇವೆ. ನಗರಸಭೆಯಲ್ಲಿ ನಿಗದಿಪಡಿಸಿರುವ ಶುಲ್ಕ ವಸೂಲಿ ಮಾಡಬೇಕೇ ಹೊರತು ಬಡವರ ಜೇಬಿಕೆ ಕೈ ಹಾಕಬೇಡಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸೂಚಿಸಿದರು. ಎಷ್ಟು ವರ್ಷಗಳ ಹಿಂದೆ ಪರಿಷ್ಕರಣೆಯಾಗಿರುವ ಶುಲ್ಕ ಪಡೆಯಲಾಗುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕು. ಸದ್ಯ ಈಗ ವಸೂಲಿ ಮಾಡುತ್ತಿರುವ ಶುಲ್ಕ ಅವೈಜ್ಞಾನಿಕವಾಗಿದೆ. ಬಡವರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಅದು ಬಿಟ್ಟು ಅವರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡಬಾರದು ಎಂದರು.
ತೆರಿಗೆ ಬಾಕಿ ವಸೂಲಿಗೆ ಸೂಚನೆ:
ನಗರಸಭೆಗೆ ಬರಬೇಕಾದ ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡಿದರೆ ಆದಾಯ ಹೆಚ್ಚಾಗುತ್ತದೆ. ಆದರೆ ಇಲ್ಲಿನ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ತೆರಿಗೆ ವಸೂಲಿಯಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಸಾಮಾನ್ಯ ಜನರಿಂದ ವಸೂಲಿ ಆಗುವುದೇನು? ಬೇರೆಯವರಿಂದ ಆಗದೆ ಇರುವುದೇನು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಬಸವರಾಜು, ನೀರಿನ ತೆರಿಗೆ ಗುರಿ 7 ಕೋಟಿ ರೂ. ಇದ್ದು, ರೂ. 1 ಕೋಟಿ ಮಾತ್ರ ವಸೂಲಿಯಾಗಿದೆ. ಇನ್ನು ಆದಾಯ ತೆರಿಗೆ ಗುರಿ 13 ಕೋಟಿ ರೂ. ಇದ್ದು, 7.5 ಕೋಟಿ ರೂ. ಮಾತ್ರ ವಸೂಲಿಯಾಗಿದೆ. ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಎಚ್.ಡಿ.ತಮ್ಮಯ್ಯ ಮಾತನಾಡಿ, ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿದರೆ ಒಬ್ಬರ ಮೇಲೆ ಅವಲಂಬನೆ ಆಗಬೇಕಾದ ಅವಶ್ಯ ಇರುವುದಿಲ್ಲ. ಇದನ್ನೇ ಬಾಕಿ ಇರಿಸಿಕೊಂಡು ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲ ಎಂದರೆ ಹೇಗೆ? ಬಂದಿರುವ ಅನುದಾನಕ್ಕೆ ಕಾಮಗಾರಿ ನಡೆಸಿದರೆ ಸಾಲದು, ಗುರಿ ಸಾಧನೆಯಾಗಬೇಕು ಎಂದು ಎಚ್ಚರಿಸಿದರು.
ಕೆಲಸ ಮಾಡಲು ಹೇಳಿದವರ‌್ಯಾರು?: ಚುನಾವಣೆಗೂ ಮುನ್ನ ನಗರದ ಕೆಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಇದಕ್ಕೆ ಯಾವ ಕಾರಣಕ್ಕೂ ಈಗ ಟೆಂಡರ್ ಕರೆದು ಬಿಲ್ ಪಾವತಿಸುವಂತಿಲ್ಲ. ಆ ರೀತಿ ಮಾಡಿದರೆ ಅಪರಾಧವಾಗುತ್ತದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದರೆ ಸುಮ್ಮನಿರುವುದರಿಲ್ಲ. ಯಾವುದೇ ರೀತಿ ಅನುಮೋದನೆ, ಮಂಜೂರಾತಿ ಇಲ್ಲ. ಕೆಲಸ ಮಾಡಿಸಿದವರು ಯಾರು ಎಂದು ತಮ್ಮಯ್ಯ ಪ್ರಶ್ನಿಸಿದರು.
ರಸ್ತೆ ಅಗೆದು ಹಾನಿ: ಅಮೃತ್ ಯೋಜನೆಯಡಿ ನಗರದಲ್ಲಿ ಪೈಪ್‌ಲೈನ್, ಯುಜಿಡಿ ಕಾಮಗಾರಿ ಪೂರ್ಣವಾಗದೆಯೇ ನಗರಸಭೆ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಕೆಲಸ ಮಾಡಬೇಕಾದರೆ ಸುಮಾರು ಮನೆಗಳಿಗೆ ಯುಜಿಡಿ, ನಲ್ಲಿ ಸಂಪರ್ಕ ಕೊಟ್ಟಿಲ್ಲ. ನಗರವಾಸಿಗಳಿಗೆ ಉತ್ತರ ಕೊಡಲಾಗುತ್ತಿಲ್ಲ. ಸಂಪರ್ಕ ಕೊಡಲು ಮೇಸ್ತ್ರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ರಸ್ತೆಯನ್ನು ಅಗೆದು ಹಾನಿ ಮಾಡಿದ್ದಾರೆ. ಮಳೆಗಾಲದಲ್ಲಿ ಓಡಾಡಲು ಕಿರಿಕಿರಿಯಾಗುತ್ತಿದೆ. ಇದನ್ನು ಯಾರು ದುರಸ್ತಿಪಡಿಸಬೇಕು ಎಂದು ಕುಮಾರ್ ಗೌಡ, ಲಕ್ಷ್ಮಣ್ ಪ್ರಶ್ನಿಸಿದರು. ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಶೇ. 95ರಷ್ಟು ಕಾಮಗಾರಿ ಮುಗಿದಿದೆ ಎಂದು ವರದಿ ನೀಡಿದ ಮೇಲೆ ಸುಪರ್ದಿಗೆ ಪಡೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.