

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಬಿಜೆಪಿ ಅವಧಿಯಲ್ಲಿ ನಡೆದಿರುವ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದು ಇಡೀ ಕಾಮಗಾರಿಯನ್ನು ಸಮಗ್ರ ತನಿಖೆಗೆ ಒಳಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸ್ಮಾರ್ಟ್‌ಸಿಟಿ ಸೇರಿದಂತೆ ಕೆಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಸ್ಮಾರ್ಟ್‌ಸಿಟಿ ಕಾಮಗಾರಿ ಲೋಪದೋಗಳ ಬಗ್ಗೆ ಇದುವರೆಗೂ ನೂರಾರು ದೂರುಗಳು ಬಂದಿವೆ. ಯಾವುದೇ ಅನುದಾನ ದುರ್ಬಳಕೆ ಆಗಬಾರದು. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು 15 ದಿನದಲ್ಲಿ ವರದಿ ಕೊಡುವಂತೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಯಣ್ಣಗೌಡ ಅವರಿಗೆ ಸೂಚಿಸಿದರು.
ಕಾಮಗಾರಿ ಗಮನಿಸಿದರೆ ಜನರಿಗೆ ತೊಂದರೆ ಕೊಡುವ ಸಲುವಾಗಿಯೇ ಸ್ಮಾರ್ಟ್‌ಸಿಟಿ ಯೋಜನೆ ತಂದಿದ್ದಾರೆ ಎನ್ನಿಸುತ್ತಿದೆ. ಸ್ಮಾರ್ಟ್‌ಸಿಟಿ ಹೇಗಿರಬೇಕು? ಕಾಮಗಾರಿ ಸರಿಯಾಗಿದ್ದರೆ ಮಳೆಗಾಲದಲ್ಲಿ ಯಾಕೆ ರಸ್ತೆ ಮೇಲೆ ನೀರು ಹರಿಯುತ್ತದೆ? ಮನೆಗಳಿಗೆ ಯಾಕೆ ನೀರು ನುಗ್ಗುತ್ತದೆ ಎಂದು ಪ್ರಶ್ನಿಸಿದರು.
ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯ 71 ಕಾಮಗಾರಿಗಳಲ್ಲಿ 66 ಕಾಮಗಾರಿ ಪೂರ್ಣಗೊಂಡಿವೆ. ಇನ್ನು 5 ಮಾತ್ರ ಪ್ರಗತಿಯಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ 990 ಕೋಟಿ ರೂ. ಬಿಡುಗಡೆ ಆಗಿತ್ತು. 80 ಕೋಟಿ ರೂ.ಗಳನ್ನು ನಿರ್ವಹಣೆಗೆ ಎಂದು ಇರಿಸಿಕೊಳ್ಳಲಾಗಿದೆ. 5 ಕಾಮಗಾರಿಗಳ 17 ಕೋಟಿ ರೂ. ಖರ್ಚು ಮಾಡುವುದು ಬಾಕಿ ಇದೆ. ಇದೆಲ್ಲಾ ಸೇರಿಸಿ 972 ಕೋಟಿ ರೂ. ಖರ್ಚು ಮಾಡಿದಂತಾಗಲಿದೆ ಎಂದು ಸ್ಮಾರ್ಟ್‌ಸಿಟಿ ಎಂಡಿ ಕೆ.ಮಾಯಣ್ಣ ಗೌಡ ಸಭೆಗೆ ಮಾಹಿತಿ ನೀಡಿದರು.
ಕಾಮಗಾರಿ ನ್ಯೂನತೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಯಾವುದನ್ನೂ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿಕೊಂಡಿಲ್ಲ. ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಾಗರಿಕರಿಂದ ದೂರು ಸ್ವೀಕರಿಸಲಾಗಿದೆ. ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಬಗ್ಗೆ 850 ದೂರುಗಳು ಬಂದಿದ್ದವು. ಅದರಲ್ಲಿ 350 ಪರಿಹಾರ ಮಾಡಲಾಗಿದೆ. ನಾಗರಿಕರಿಂದ ಕುವೆಂಪು ರಂಗಮಂದಿರದಲ್ಲಿ 1,800 ದೂರುಗಳು ಬಂದಿವೆ. ಅವೆಲ್ಲವನ್ನೂ ದಾಖಲು ಮಾಡಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.