

ಅರಕಲಗೂಡು: ಪಟ್ಟಣದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ವೀರಶೈವ ಲಿಂಗಾಯತ ಜನೋಪಯೋಗಿ ಸಹಕಾರಿ ಸಂಘದ 2022-2023ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜರುಗಿತು.
ಸಂಘದ ನಿರ್ದೇಶಕ ವಾಗೀಶ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಅಧ್ಯಕ್ಷ ಎನ್. ರವಿಕುಮಾರ್ ಮಾತನಾಡಿ, ಎಲ್ಲ ಸಮಾಜದವರು ನೀಡುತ್ತಿರುವ ಉತ್ತಮ ಸಹಕಾರದಿಂದಾಗಿ ಸಂಘ ಸ್ಥಾಪನೆಯಾದ ಕೇವಲ ಒಂದೇ ವರ್ಷದಲ್ಲಿ ಒಂದು ಕೋಟಿ ರೂ. ವಹಿವಾಟು ನಡೆಸಿದ್ದು 1.70 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ವಿವಿಧ ಮಹಿಳಾ ಸ್ವ ಸಹಾಯ ಸಂಘಗಳಿಗೆ ಹಾಗೂ ಪಟ್ಟಣದಲ್ಲಿ ವ್ಯವಹಾರ ನಡೆಸುವ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಶಶಿಕಲಾ ಮಾತನಾಡಿದರು. ನಿರ್ದೇಶಕರಾದ ರುದ್ರಪ್ಪ, ಯೋಗೇಶ್, ವಿರೂಪಾಕ್ಷ, ಧರ್ಮ, ನಿಂಗರಾಜಯ್ಯ, ಸುನಿತಾ ಲೋಕೇಶ್, ಕೆ.ಎಂ.ಮಹದೇವಪ್ಪ, ಹೇಮಲತಾ ಸದಾಶಿವಪ್ಪ, ಸಿ.ಪಿ.ನಂಜಪ್ಪ ಇತರರಿದ್ದರು. ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿದ ರಾಮನಾಥಪುರ ಈಶ್ವರಾಚಾರಿ, ಸವಿತಾ ಸುರೇಶ್, ಕುಮಾರ್, ಕೆ.ವಿ.ಪ್ರಸನ್ನ, ಮಮತಾ ಲಿಂಗರಾಜಯ್ಯ, ಕಿರಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.