

ವಿಜಯವಾಣಿ ಸುದ್ದಿಜಾಲ, ಬೆಂಗಳೂರು
ಬೆಂಗಳೂರು: ಹೈನೋದ್ಯಮ ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಸ್ಸಿಎಸ್ಪಿ, ಟಿಎಸ್ಪಿ ಫಲಾನುಭವಿಗಳಿಗೆ ಮನೆಗೊಂದು ಹಸು ನೀಡಲು ಚಿಂತನೆ ನಡೆಸಿದೆ. ಸದ್ಯ ಈ ವರ್ಗದ ಫಲಾನುಭವಿಗಳಿಗೆ ವಾಹನಗಳನ್ನು ಕೊಡಲಾಗುತ್ತಿದೆ. ಹಸು ಕೊಟ್ಟರೆ ಆದಾಯವೂ ಹೆಚ್ಚಾಗುತ್ತದೆ ಜತೆಗೆ ಕೆಎಂಎಫ್ಗೆ ಬರುವ ಹಾಲಿನ ಪ್ರಮಾಣವೂ ಏರಿಕೆ ಆಗಲಿದೆ. ಈ ಸಂಬಂಧ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್್ಕ ಹೇಳಿದ್ದಾರೆ. ವಿಶ್ವ ಕ್ಷೀರ ದಿನದ ಹಿನ್ನಲೆಯಲ್ಲಿ ಶುಕ್ರವಾರ ವಿಜಯವಾಣಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ನಂದಿನಿ ಬ್ರಾಂಡ್ ಉತ್ಪನ್ನಗಳನ್ನು ದೇಶ ವಿದೇಶದಲ್ಲಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ದುಬೈನಲ್ಲಿ ಮಳಿಗೆ ತೆರೆಯಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೌದಿ, ಅಮೆರಿಕ ಸೇರಿ ಇನ್ನು ಹಲವು ಕಡೆ ಮಳಿಗೆಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್್ಕ ತಿಳಿಸಿದರು. ಕಳೆದ ವರ್ಷ 85.25 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ ಈಗ 94.26 ಲಕ್ಷ ಲೀಟರ್ಗೆ ಏರಿಕೆ ಆಗಿದೆ. ಸದ್ಯದಲ್ಲಿಯೇ ಕೆಎಂಎಫ್ ಹಾಲು ಸಂಗ್ರಹ 1 ಕೋಟಿ ಲೀಟರ್ ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಉತ್ಪನ್ನಗಳಿಗೆ ಕ್ರಮ: ಕೆಎಂಎಫ್ ಸಂಗ್ರಹಿಸುವ ಹಾಲಿನಲ್ಲಿ 51 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ ಹಾಲನ್ನು ನಾನಾ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತಿದೆ. ಹೊಸದಾಗಿ ನಾನಾ ಫ್ಲೇವರ್ ಐಸ್ ಕ್ರೀಂ ಮಾಡಲು ಪ್ರಾರಂಭಿಸಿದ್ದರಿಂದ ಬಾರಿ ಬೇಡಿಕೆ ಬಂತು. ಇದೇ ರೀತಿ ನಾನಾ ಬಗೆಯ ಸ್ವೀಟ್ ಕೂಡ ಮಾಡಲಾಗಿದ್ದು, ಈ ಬಾರಿ ದಸರಾದಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ ಎಂದರು. ನಂದಿನಿ ಬ್ರಾ್ಯಂಡ್ನಲ್ಲಿ ನಾನಾ ಫ್ಲೇವರಿಂಗ್ ಸ್ವೀಟ್ ಮಾಡಲಾಗುತ್ತಿದೆ. ರಾಜ್ಯೋತ್ಸವ ಅಂಗವಾಗಿ ಮೈಸೂರು ಪಾಕ್ ರೀತಿಯಲ್ಲಿಯೇ ಬೆಲ್ಲ ಹಾಗೂ ಇತರೆ ಉತ್ಪನ್ನ ಬಳಸಿ ಕರ್ನಾಟಕ ಪಾಕ್ ಮಾಡಲು ಉದ್ದೇಶಿಸಲಾಗಿದೆ ಎಂದರು.
ಸೈಲೇಜ್ಗೆ ಪ್ರೋತ್ಸಾಹ: ಹಾಲಿನ ಇಳುವರಿ ಹೆಚ್ಚಿಸಲು ಮೆಕ್ಕೆಜೋಳ ಬಳಕೆ ಮಾಡಿ ಮಾಡುವ ಪಶು ಆಹಾರವಾದ ಸೈಲೇಜ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 15,000 ಮೆಟ್ರಿಕ್ ಟನ್ ಸೈಲೇಜ್ಗೆ ಬೇಡಿಕೆ ಇದ್ದು ಸದ್ಯ 6500 ಟನ್ ಪೂರೈಕೆಯಾಗುತ್ತಿದೆ. ಸೈಲೇಜ್ ಮಾಡುವ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದ ರೈತರಿಗೂ ಪ್ರೋತ್ಸಾಹ ಸಿಗಲಿದ್ದು, ಅವರಿಗೆ ಆದಾಯವೂ ಬರಲಿದೆ. ಹಾಲಿನ ಉತ್ಪಾದನೆಯೂ ಹೆಚ್ಚಳವಾಗಲಿದೆ ಎಂದರು.
ನಂದಿನಿ ಬೂತ್ನಲ್ಲಿ ದೋಸೆ ಹಿಟ್ಟು : ಹಾಲು, ಮೊಸರು ಸೇರಿ ನಂದಿನಿ ಉತ್ಪನ್ನಗಳನ್ನು ಕೊಳ್ಳಲು ಗ್ರಾಹಕರು ನಂದಿನಿ ಮಳಿಗೆಗಳಿಗೆ ಸಹಜವಾಗಿಯೇ ಬರುತ್ತಾರೆ. ಆದ್ದರಿಂದ ಅಲ್ಲಿಯೇ ನಂದಿನಿ ಬ್ರಾ್ಯಂಡ್ನ ದೋಸೆ ಹಿಟ್ಟು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಲ್ಲೆಡೆ ನಂದಿನಿ ಉತ್ಪನ್ನ ಘಮ : ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ನಂದಿನಿ ಉತ್ಪನ್ನಗಳು ಲಭ್ಯವಿರುವಂತೆ ಮಾಡಲು ಯೋಜಿಸಲಾಗಿದೆ. ಈಗಾಗಲೇ ಅಯೋಧ್ಯೆ ಸೇರಿ ಹಲವು ಕಡೆ ಮಳಿಗೆಗಳನ್ನು ತೆರೆಯಲಾಗಿದೆ. ಕಾಶಿ, ಶಿರಡಿ, ಪುರಿಯಲ್ಲಿಯೂ ನಂದಿನಿ ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೆ, ವಿಮಾನ ನಿಲ್ದಾಣ, ರೈಲ್ವೆ, ಮೆಟ್ರೋ ಮತ್ತು ಬಸ್ ನಿಲ್ಡಾಣಗಳಲ್ಲಿಯೂ ನಂದಿನಿ ಉತ್ಪನ್ನ ಲಭ್ಯವಿರುವಂತೆ ಮಾಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹೇಳಿದರು.
ಹಾಲು ಮಾರಾಟದಿಂದ ನಷ್ಟ!: ಬರೀ ಹಾಲು ಮಾರಾಟ ನೆಚ್ಚಿಕೊಂಡರೆ ಕೆಎಂಎಫ್ ನಷ್ಟದ ಹಾದಿಯಲ್ಲಿ ಸಾಗಬೇಕಿತ್ತು. ಆದರೆ ಇತರೆ ಉತ್ಪನ್ನಗಳು ಸಂಸ್ಥೆಗೆ ಲಾಭ ತಂದುಕೊಡುತ್ತಿವೆ. ವಾರ್ಷಿಕ 22 ಸಾವಿರ ಕೋಟಿ ಟರ್ನ್ಓವರ್ ನಡೆಸುತ್ತಿದ್ದು, ಪ್ರತಿನಿತ್ಯ ರೈತರಿಗೆ 28 ಕೋಟಿ ರೂ.ನಂತೆ ಪಾವತಿ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ವೆಬ್ ನೋಡಿ ಹಸು ಖರೀದಿಸಿ: ಹೆಚ್ಚು ಹಾಲು ಕೊಡುತ್ತದೆ ಎಂದು ಹಸು ಮಾರಾಟದಲ್ಲಿ ನಡೆಯುವ ವಂಚನೆ ತಪ್ಪಿಸಲು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ವಿಶೇಷ ವ್ಯವಸ್ಥೆ ಮಾಡಿದೆ. ಮಂಡಳಿಯ ವೆಬ್ಸೈಟ್ನಲ್ಲಿ ಪ್ರಮಾಣೀಕೃತ ತಳಿ ಸಂರಕ್ಷಣಾ ಕೇಂದ್ರದ ಮಾಹಿತಿ ಇದೆ. ಅಲ್ಲಿ ತಳಿಯ ಮಾಹಿತಿ ಇದೆ, ರೋಗರುಜಿನ ರಹಿತ ಜಾನುವಾರು ಕೂಡ ಸಿಗಲಿದೆ ಎಂದು ಎಂಡಿ ಎಂ.ಕೆ.ಜಗದೀಶ್ ತಿಳಿಸಿದರು.
ಕ್ರಿಕೆಟ್ ತಂಡಕ್ಕೆ ಸ್ಪಾನ್ಸರ್ನಿಂದ ಲಾಭ: ನಮ್ಮ ಕೆಎಂಎಫ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಯೋಜಕತ್ವ ಮಾಡುತ್ತಿರುವ ಬಗ್ಗೆ ನಮ್ಮ ರೈತರಿಗೆ ಹೆಮ್ಮೆ ಇದೆ ಎಂದು ಭೀಮಾ ನಾಯ್ಕ ತಿಳಿಸಿದರು. ಐರ್ಲೆಂಡ್, ಸ್ಕಾಟ್ಲೆಂಡ್ ತಂಡಕ್ಕೆ ಪ್ರಾಯೋಜಕತ್ವ ಕೊಡಬೇಕೆಂದೇನು ಇರಲಿಲ್ಲ. ಟೆಂಡರ್ ಕರೆಯಲಾಗಿತ್ತು. ಭಾರತ ತಂಡಕ್ಕೆ ಪ್ರಾಯೋಜಕತ್ವ ಕೊಡುವುದು ಕಷ್ಟ ಸಾಧ್ಯ. ಹೀಗಾಗಿ ಶ್ರೀಲಂಕಾ, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಾಯೋಜಕತ್ವ ಮಾಡುವ ಉದ್ದೇಶವಿತ್ತು. ಅಮುಲ್ ದಕ್ಷಿಣ ಆಫ್ರಿಕಾ ತಂಡವನ್ನು ಆರಿಸಿಕೊಂಡಿತು ಎಂದು ವಿವರಿಸಿದರು.
ರೈತರಿಗೆ ವಿಮೆ ನೀಡಲು ಪತಂಜಲಿ ಮಾಡಲ್: ಹರಿದ್ವಾರದ 500 ಎಕರೆ ಜಾಗದಲ್ಲಿ ಪತಂಜಲಿ ಕಂಪನಿಯ ಉತ್ಪಾದನಾ ಘಟಕ ಇದ್ದು, ಅಲ್ಲಿಗೆ ನಮ್ಮ ತಂಡ ಭೇಟಿ ನೀಡಿದ್ದೆವು. ಅದರ ಉತ್ಪನ್ನಗಳ ವಿಚಾರಕ್ಕಿಂತ ಅವರ ಐಟಿ ತಂತ್ರಜ್ಞಾನ ಬಳಕೆ, ಸಾಫ್ಟ್ವೇರ್ ಉಪಯೋಗಗಳು ನವೀನರೀತಿಯದ್ದಾಗಿದ್ದು ಗಮನ ಸೆಳೆಯುವಂತಿತ್ತು. ಅಲ್ಲದೇ ಪತಂಜಲಿ ತನ್ನ ಗ್ರಾಹಕರಿಗೆ ಕಾರ್ಡ್ ಸ್ಕೀಮ್ ನೀಡಿದೆ. ಅದನ್ನು ಹೊಂದಿರುವವರು 5 ಲಕ್ಷ ರೂ. ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ. ಅದು ಪ್ರೀಪೇಯ್್ಡ ಕಾರ್ಡ್ ಆಗಿದ್ದು, ಎಟಿಎಂ ರೀತಿಯೂ ಬಳಕೆ ಮಾಡಬಹುದು. ಇಂತಹ ಕಾರ್ಡ್ ಬಳಸಿ ರೈತರಿಗೆ ಏಕೆ ಅನುಕೂಲಮಾಡಿಕೊಡಬಾರದೆಂದು ಪತಂಜಲಿಯವರೇ ನಮಗೆ ಸಲಹೆ ನೀಡಿದ್ದಾರೆ, ಜತೆಗೆ ಗ್ರಾಹಕರಿಗೂ ಇಂತಹ ಕಾರ್ಡ್ ನೀಡಿ, ಅವರು ಸ್ವೆಪ್ ಮಾಡಿ ಬಳಕೆ ಮಾಡಿದಾಗ ರಿಯಾಯಿತಿ ಕೊಡಿ, ಗ್ರಾಹಕರೂ ಸಹ ದೀರ್ಘಕಾಲ ನಿಮ್ಮಲ್ಲಿ ಉಳಿಯುತ್ತಾರೆಂದು ಸಲಹೆ ನೀಡಿದ್ದಾರೆ. ಅದನ್ನು ವರ್ಕ್ಔಟ್ ಮಾಡಿದರೆ ಖಂಡಿತ ನಮ್ಮ ರೈತರು, ಗ್ರಾಹಕರಿಗೆ ಅನುಕೂಲವಾಗಲಿದೆ. ಇಂತಹ ವ್ಯವಸ್ಥೆ ಜಾರಿಗೆ ತರುವ ಚಿಂತನೆ ಇದೆ ಎಂದು ಕೆಎಂಎಫ್ ಎಂಡಿ ಎಂ.ಕೆ.ಜಗದೀಶ್ ತಿಳಿಸಿದರು.
ಹಾವೇರಿ, ಬೀದರ್ನಲ್ಲಿ ಸಾವಿರ ಹಸು: ಹೈನೋದ್ಯಮವನ್ನು ಪ್ರೋತ್ಸಾಹ ಮಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಹಾವೇರಿ ಮತ್ತು ಬೀದರ್ ಜಿಲ್ಲೆಯಲ್ಲಿ ಹಾಲು ಉತ್ಪಾದಕರನ್ನು ಗುರುತಿಸಿ, ತಲಾ 1 ಸಾವಿರ ಹಸುಗಳನ್ನು ಕೊಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ಎಸ್ಸಿಎಸ್ಪಿ ಹಾಗೂ ಟಿಎಸ್ಪಿಯಲ್ಲಿ ಫಲಾನುಭವಿಗಳಿಗೆ ಹಸುಗಳನ್ನು ನೀಡುವ ಯೋಜನೆಯನ್ನು ರೂಪಿಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರ ಜತೆ ಮಾತುಕತೆ ನಡೆಸಲಾಗಿದೆ ಎಂದು ಭೀಮಾನಾಯ್್ಕ ತಿಳಿಸಿದರು.
5 ಲಕ್ಷ ಮೇವಿನ ಕಿಟ್ ವಿತರಣೆ : ಕೆಎಂಎಫ್ ಬೇಸಿಗೆಯಲ್ಲಿ ಕೆಎಂಎಫ್ 5 ಲಕ್ಷ ಮೇವಿನ ಕಿಟ್ ವಿತರಿಸಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ನೀರಾವರಿ ಮಾಡುವ ರೈತರಿಗೆ ಈ ಕಿಟ್ ಉಚಿತವಾಗಿ ಕೊಡಲಾಗಿದೆ. ಎನ್ಡಿಡಿಬಿ 13 ಕೋಟಿ ರೂ. ವೆಚ್ಚದ 3 ಲಕ್ಷ ಕಿಟ್ ಗಳನ್ನು ಉಚಿತವಾಗಿ ಕೊಟ್ಟಿದೆ. ಅದೆಲ್ಲವನ್ನೂ ಉಚಿತವಾಗಿ ಹಾಲು ಉತ್ಪಾದಕರಿಗೆ ಕೊಟ್ಟಿದ್ದೇವೆ ಎಂದು ಭೀಮಾ ನಾಯ್್ಕ ಹೇಳಿದರು.
ಕೆಎಂಎಫ್ 250 ಹುದ್ದೆ ಭರ್ತಿ: ಕೆಎಂಎಫ್ನಲ್ಲಿ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ 480 ಹುದ್ದೆ ಭರ್ತಿ ಮಾಡಲಾಗಿತ್ತು. ಇನ್ನೂ 500 ಹುದ್ದೆ ಖಾಲಿ ಇದ್ದು, ಈ ಪೈಕಿ 250 ಹುದ್ದೆ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೆರಡು ತಿಂಗಳಲ್ಲಿ ಈ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ಭೀಮಾ ನಾಯ್್ಕ ಹೇಳಿದರು.
5 ರೂ.ಗೆ ಹೆಚ್ಚಿಸಲು ಬೇಡಿಕೆ: ಹಾಲು ಉತ್ಪಾದಕರು ಕಷ್ಟದಲ್ಲಿದ್ದಾರೆ. ಹಾಗಾಗಿ ಪ್ರತಿ ಲೀಟರ್ಗೆ 5 ರೂ. ಹೆಚ್ಚಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಪ್ರತಿ ಬಾರಿ ಮಂಡಳಿ ಸಭೆಯಲ್ಲಿ ಚರ್ಚೆಯಾಗುತ್ತಿದೆ. 5 ರೂ. ಹೆಚ್ಚಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹಾಲಿನ ದರ ಕರ್ನಾಟಕದಲ್ಲಿ 12-17 ರೂ. ವ್ಯತ್ಯಾಸವಿದೆ. ಅಲ್ಲದೆ,ರಾಜ್ಯದಲ್ಲಿ ಖಾಸಗಿ ಕಂಪನಿಗಳು ಲೀ.54ರೂ. ಮಾರಾಟ ಮಾಡುತ್ತಿವೆ. ಹಾಗಾಗಿ ರೈತರು ಲೀಟರ್ಗೆ 5 ರೂ. ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಇದನ್ನು ನಾವು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕು ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್್ಕ ಹೇಳಿದರು.
ಪ್ರೋತ್ಸಾಹ ಧನ ಶೀಘ್ರ : ಹೈನುಗಾರರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಇದ್ದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ 212 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಈ ಹಣ ರೈತರ ಕೈಸೇರಿದೆ. ಇನ್ನು ಸರ್ಕಾರ ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಧನ 400 ಕೋಟಿ ಬಾಕಿ ಇದ್ದು, ಇದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಡಿಬಿಟಿ ಮೂಲಕ ಎರಡು ಮೂರು ದಿನದಲ್ಲಿ 320 ಕೋಟಿ ರೂ. ಪಾವತಿಯಾಗಲಿದೆ ಎಂದು ಭೀಮಾ ನಾಯ್್ಕ ಹೇಳಿದರು.
1. ಹಾಲು ಇಳುವರಿ ಹೆಚ್ಚಳಕ್ಕೆ ಸೈಲೇಜ್ ಯೋಜನೆ
2. ಹಾಲಿನ ಸಂಗ್ರಹ 1 ಕೋಟಿ ಲೀಟರ್ಗೆ ಹೆಚ್ಚಿಸುವುದು
3. ವಿದೇಶಗಳಲ್ಲೂ ಕೆಎಂಎಫ್ ಉತ್ಪನ್ನ ಮಳಿಗೆ ಆರಂಭ
4. ಮೈಸೂರು ಪಾಕ್ ರೀತಿ ಕರ್ನಾಟಕ ಪಾಕ್ಗೆ ಸಿದ್ಧತೆ