10 ವರ್ಷದಲ್ಲಿ ಕೋಟಿ ಉದ್ಯೋಗ ಸೃಷ್ಟಿ ಗುರಿ; 9ನೇ ತರಗತಿಯಿಂದಲೇ ಉದ್ಯಮಶೀಲತೆ ಪಠ್ಯ ಕಡ್ಡಾಯ..

CNA
ಡಾ.ಎಸ್. ಸೆಲ್ವಕುಮಾರ್ ಸಲ್ಲಿಸಿದ ಕೌಶಲ, ಉದ್ಯಮಶೀಲತೆ ಮತ್ತು ನವೋದ್ಯಮ ಕಾರ್ಯಪಡೆ ಶಿಫಾರಸು ಬಿಡುಗಡೆ ಮಾಡಿದ ಸಚಿವ ಅಶ್ವತ್ಥ ನಾರಾಯಣ.
Published on

ಬೆಂಗಳೂರು: ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ಪಿಯುಸಿವರೆಗೆ ಉದ್ಯಮಶೀಲತೆ ಬೆಳವಣಿಗೆ ತಿಳಿಸುವ ಪಠ್ಯಕ್ರಮ ಮತ್ತು 8ನೇ ತರಗತಿಯಿಂದ ಪದವಿಯವರೆಗೂ ವೃತ್ತಿ ಮಾರ್ಗದರ್ಶನ ಕಡ್ಡಾಯಗೊಳಿಸಬೇಕು ಎಂದು ಕೌಶಲ, ಉದ್ಯಮಶೀಲತೆ ಮತ್ತು ನವೋದ್ಯಮ ಕಾರ್ಯಪಡೆಯು ಶಿಫಾರಸು ಮಾಡಿದೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಾರ್ಯಪಡೆ ಅಧ್ಯಕ್ಷರೂ ಆದ ಉದ್ಯಮಶೀಲತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಕೊಟ್ಟ ವರದಿಯನ್ನು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ 10 ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ. ಕೃಷಿ ಸೇರಿ ಎಲ್ಲ ವಲಯಗಳಲ್ಲಿ ಗರಿಷ್ಠ ಉದ್ಯೋಗಾವಕಾಶದ ಸಾಧ್ಯತೆ ಇದೆ. ಇದನ್ನು ನನಸಾಗಿಸಲು ಪ್ರಮುಖ ಇಲಾಖೆಗಳನ್ನೆಲ್ಲ ಸೇರಿಸಿಕೊಂಡು ಕಾರ್ಯ ಪ್ರವೃತ್ತರಾಗಲಿದ್ದೇವೆ ಎಂದರು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ, ನಿರುದ್ಯೋಗ ನಿವಾರಣೆ ಮತ್ತು ಗುಣಮಟ್ಟದ ಶಿಕ್ಷಣ ಇವು ಸಾಧ್ಯವಾಗಬೇಕೆಂದರೆ ಕಲಿಕೆಯ ಹಂತದಿಂದಲೇ ಕೌಶಲವನ್ನು ಕಲಿಸುವುದರ ಜತೆಗೆ ಉದ್ಯಮಶೀಲ ಮನೋಭಾವ ಬೆಳೆಸಬೇಕಾಗಿದೆ. ಹಾಗಾಗಿ ಕಾರ್ಯಪಡೆ ಶಿಫಾರಸಿನಂತೆ ಜಿಲ್ಲಾ ಮಟ್ಟದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಉದ್ಯಮಶೀಲತಾ ವಿಕಸನ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇಸ್ರೇಲ್ ಮಾದರಿ: ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲ ಜಿಲ್ಲೆಗಳಲ್ಲೂ ವಿಕಸನ ಅಥವಾ ಪರಿಪೋಷಣಾ ಕೇಂದ್ರಗಳ ಜಾಲವನ್ನು ಅಸ್ತಿತ್ವಕ್ಕೆ ತರಬೇಕು. ಇದನ್ನು ಬಲಪಡಿಸಲು ಇಸ್ರೇಲಿನ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಾದರಿಯಲ್ಲಿ ‘ಕರ್ನಾಟಕ ಸಂಶೋಧನೆ ಮತ್ತು ನಾವೀನ್ಯತೆ ಪ್ರಾಧಿಕಾರ ಸ್ಥಾಪಿಸಿ, ಅದನ್ನು ನೋಡಲ್ ಏಜೆನ್ಸಿಯಾಗಿ ಮಾಡಲಿದ್ದೇವೆ ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಜೀವನೋಪಾಯ ಇಲಾಖೆ ಮಿಷನ್ ನಿರ್ದೇಶಕಿ ಮಂಜುಶ್ರೀ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಉದ್ಯಮಿ, ಕಾರ್ಯಪಡೆಯ ಸಂಚಾಲಕ ಮದನ್ ಪದಕಿ ಇದ್ದರು.

ಇದೊಂದು ವಿನೂತನ ಪ್ರಯತ್ನ. ಖಾಸಗಿ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಸೇರಿ ಸಿದ್ಧಪಡಿಸಿದ್ದು ಗ್ರಾಮೀಣ ಮಟ್ಟದಲ್ಲಿ ದೊಡ್ಡ ಬದಲಾವಣೆ ತರಲು ನೆರವಾಗುತ್ತದೆ. | ಪ್ರಶಾಂತ್ ಪ್ರಕಾಶ್ ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ

ಡಿಜಿಟಲ್ ಕೌಶಲ ಸಮೀಕ್ಷೆ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲಗಳು ಯಾವ ಮಟ್ಟದಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾದರಿ ಸಮೀಕ್ಷೆ ಕೈಗೊಳ್ಳಬೇಕು. ಜತೆಗೆ, ಜಿಲ್ಲಾ ಮಟ್ಟದಲ್ಲಿ ‘ಉದ್ಯಮ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಇದರಲ್ಲಿ ಹೇಳಲಾಗಿದೆ. ಹೊಸ ಉದ್ಯಮಿಗಳನ್ನು ಪೋ›ತ್ಸಾಹಿಸಲು ಏಂಜಲ್ ಹೂಡಿಕೆದಾರರು, ಬ್ಯಾಂಕ್ ಮತ್ತು ಇನ್ನಿತರ ಸೂಕ್ತ ಹಣಕಾಸು ಸಂಸ್ಥೆಗಳಿಂದ ಸಾಫ್ಟ್ ಲೋನ್ ಒದಗಿಸಲು ವ್ಯವಸ್ಥೆ ಮಾಡುವ ಅಗತ್ಯವಿದೆ. ಇವೆಲ್ಲವುಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಭರವಸೆ ನೀಡಿದರು. ಯುವಕರಿಗೆ ಅಪಾರ ಬೇಡಿಕೆ: ಡಿಜಿಟಲ್ ಆರ್ಥಿಕತೆಯಲ್ಲಿ ಕೌಶಲಪೂರ್ಣ ಯುವಜನರಿಗೆ ಅಪಾರ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಪದವಿ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ ಕೋರ್ಸಗಳನ್ನು ಅಭಿವೃದ್ಧಿಪಡಿಸಲಾಗುವುದು. ಮಿಗಿಲಾಗಿ ಯುವಜನರನ್ನು ಭವಿಷ್ಯದ ಕೌಶಲಗಳಲ್ಲಿ ಸನ್ನದ್ಧಗೊಳಿಸಲು ಇನ್ಪೋಸಿಸ್, ಮೈಕ್ರೋಸಾಫ್ಟ್ , ಐಬಿಎಂ ಮುಂತಾದ ಕಂಪನಿಗಳಲ್ಲಿ ಇಂಟರ್ನ್-ಶಿಪ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್, ಈ ಕಂಪನಿಗಳೊಂದಿಗೆ ಸಹಯೋಗ ಹೊಂದಲಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಕೃಷಿ ವಿ.ವಿ.ಗಳು, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿವಿ ಮೂಲಕ 8 ಬಿಜಿನೆಸ್ ಸ್ಕೂಲ್​ಗಳ ನೆರವಿನೊಂದಿಗೆ ರೈತ ಉತ್ಪಾದಕ ಸಂಸ್ಥೆಗಳ ನಿರ್ವಾಹಕರಿಗೆ ಕೃಷಿ ಮತ್ತು ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಮರ್ಥ್ಯ ಬಲವ ರ್ಧನೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಫಾರಸು ಮಾಡಲಾಗಿದೆ. ಇದು ಸಾಧ್ಯವಾದರೆ ರೈತ ಸಮುದಾಯದ ಸಬಲೀಕರಣದ ನಿಟ್ಟಿನಲ್ಲಿ ದಾಪುಗಾಲು ಇಟ್ಟಂತಾಗುತ್ತದೆ. | ಎಸ್.ಸೆಲ್ವಕುಮಾರ್ ಉದ್ಯಮಶೀಲತೆ ಇಲಾಖೆ ಪ್ರಧಾನ ಕಾರ್ಯದರ್ಶಿ

ಶಿಫಾರಸುಗಳು

  • ಶಾಲೆ-ಕಾಲೇಜುಗಳಲ್ಲಿ ಡಿಜಿಟಲ್ ಕೌಶಲ, ವಾಣಿಜ್ಯೋದ್ಯಮ ಬೆಳವಣಿಗೆ
  • ಗ್ರಾಪಂ ಗ್ರಂಥಾಲಯಗಳ ಮೂಲಕ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ ಪರಿಚಯಿಸಬೇಕು.
  • ಹೊಸ ಯುಗದ ವಿಕಸನ ಜಾಲವನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು.
  • ಉದ್ಯಮಶೀಲತಾ ವಿಕಸನ ಬಲ ಪಡಿಸಲು ಇಸ್ರೇಲ್ ಮಾದರಿಯಲ್ಲಿ ನೋಡಲ್ ಏಜೆನ್ಸಿ ಸ್ಥಾಪಿಸಬೇಕು.
  • ಉದಯೋನ್ಮುಖ ಉದ್ಯಮಶೀಲರನ್ನು ಪ್ರೋತ್ಸಾಹಿಸಲು ಮೃದು ಸಾಲ ಸೌಲಭ್ಯ, ಮಾರುಕಟ್ಟೆ ಪ್ರವೇಶ ಮತ್ತು ಬೆಂಬಲ ನೀಡಬೇಕು.
  • ಉದಯೋನ್ಮುಖ ಡಿಜಿಟಲ್ ಆರ್ಥಿಕ ವಲಯದಲ್ಲಿ ಕೌಶಲದ ಅಂತರ ಮತ್ತು ಕೌಶಲದ ಮಾನವ ಶಕ್ತಿ ಬೇಡಿಕೆಯನ್ನು ಪರಿಹರಿಸಲು ಪದವೀಧರ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ ಕೋರ್ಸ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಬೇಕು.
  • ಬೆಂಗಳೂರು ಕ್ಲಸ್ಟರ್ ಆಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಭವಿಷ್ಯದ ಡಿಜಿಟಲ್ ಉದ್ಯೋಗ ಉಪಕ್ರಮಗಳನ್ನು ಪ್ರಾರಂಭಿಸಬೇಕು.
  • ಕೃಷಿ ವಿಶ್ವವಿದ್ಯಾಲಯ, ಆರ್​ಡಿಪಿಆರ್ ವಿಶ್ವವಿದ್ಯಾಲಯ ಮತ್ತು ಎಫ್​ಪಿಒಗಳ ಮೂಲಕ ರೈತ ಉತ್ಪಾದಕ ಸಂಸ್ಥೆಗಳ ಕಾರ್ಯ ನಿರ್ವಾಹಕರಿಗೆ ಸಾಮರ್ಥ್ಯ ಬಲದವರ್ಧನಾ ಕಾರ್ಯಕ್ರಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net