ಮಳೆ ಕೊರತೆಯಿಂದ ಕಮರುತ್ತಿವೆ ಬೆಳೆ

Raagi
ಕಡೂರು ತಾಲೂಕಿನ ಸಿಂಗಟಗೆರೆ ಭಾಗದಲ್ಲಿ ರಾಗಿ ಬೆಳೆ ಒಣಗಿರುವುದು.
Published on

ಕಡೂರು: ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವುದರಿಂದ ತಾಪಮಾನ ಏರಿಕೆಯಾಗುತ್ತಿದೆ. ಮುಖ್ಯವಾಗಿ ರಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಫಸಲು ಬರುವುದಿರಲಿ, ಹುಲ್ಲಾದರೂ ಸಿಗುತ್ತೇನೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇದು ಕೂಡ ಹುಸಿಯಾಗುವ ಸಾಧ್ಯತೆ ಇದ್ದು, ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಲ್ಲಿ ರಾಸುಗಳಿಗೆ ಮೇವಿನ ಕೊರತೆ ಆತಂಕ ಶುರುವಾಗಿದೆ.

ಹಿಂಗಾರು ಮಳೆಯೂ ಕೈಕೊಟ್ಟರೆ ಬರ ಉಂಟಾಗುವ ಸಂಭವವಿದೆ. ಮೇವಿನ ಕೊರತೆ ನೀಗಿಸಲು ಮೇವಿನ ಬೀಜ ಉಚಿತ ವಿತರಣೆಗೆ ಪಶುಸಂಗೋಪನೆ ಇಲಾಖೆ ಸಜ್ಜಾಗಬೇಕಿದೆ. ಮುಂಗಾರು ಮಳೆ ಕೊರತೆ ಪರಿಣಾಮ ತಾಲೂಕಿನಾದ್ಯಂತ 23 ಸಾವಿರ ಹೆಕ್ಟೇರ್ ಪೈಕಿ ಮಳೆಯಾಶ್ರಿತ ರಾಗಿ ಬೆಳೆ ನೆಲ ಬಿಟ್ಟು ಮೇಲಕ್ಕೆ ಬಂದಿಲ್ಲ. ತೇವಾಂಶದ ಕೊರತೆ ನಡುವೆ ಬಿಸಿಲಿನ ತಾಪಕ್ಕೆ ರಾಗಿ ಬೆಳೆ ಬತ್ತಿಹೋಗುತ್ತಿದೆ. ಹಸಿರು ಚಿಗುರದೆ ಕೆಲವೆಡೆ ಮೊಳಕೆಯಲ್ಲಿರುವ ರಾಗಿ ಸುಟ್ಟು ಹೋಗುತ್ತಿದೆ. ಕೊಳವೆಬಾವಿ ಹೊಂದಿರುವ ರೈತರು ಬೆಳೆ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.
ಹಿಂಗಾರು ಮಳೆ ಸುರಿದರೂ ನಿರೀಕ್ಷಿತ ಮಟ್ಟದಲ್ಲಿ ರಾಗಿ ಇಳುವರಿ ಸಾಧ್ಯವಿಲ್ಲ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಕನಿಷ್ಠ ಮೇವಾದರೂ ಸಿಗುವುದೇ ಎಂಬ ನಿರೀಕ್ಷೆ ಹೊಂದಿರುವ ರೈತರಿಗೆ ಬಿಸಿಲು ಮತ್ತೊಂದು ಹೊಡೆತ ನೀಡಲು ಆರಂಭಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬರುವ ದಿನಗಳಲ್ಲಿ ಮೇವಿನ ಕೊರತೆ ತೀವ್ರವಾಗಲಿದೆ.
ಗ್ರಾಮೀಣ ಭಾಗಗಳಲ್ಲಿ ಬಹುತೇಕ ರೈತರ ಮನೆಗಳಲ್ಲಿ ಹೈನುಗಾರಿಕೆಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಬೆಳೆ ಜತೆಗೆ ಹುಲ್ಲು ದೊರಕುತ್ತಿತ್ತು. ಮಳೆ ಉತ್ತಮವಾಗಿದ್ದರೆ ರಾಗಿ ಫಸಲು ಚೆನ್ನಾಗಿ ಬಂದು ವರ್ಷವಿಡೀ ಮೇವಿನ ಕೊರತೆ ನೀಗಿಸುತ್ತಿತ್ತು. ಮಳೆ ಇಲ್ಲದೆ ಅತ್ತ ರಾಗಿ ಬೆಳೆಯೂ ಇಲ್ಲ, ಇತ್ತ ಹುಲ್ಲು ಕೂಡ ಸಿಗುವುದು ಕಷ್ಟಸಾಧ್ಯ. ರಾಸುಗಳನ್ನು ನಂಬಿ ಬದುಕು ನಡೆಸುತ್ತಿರುವ ಕುಟುಂಬಗಳು ಮೇವಿಗೇನು ಮಾಡುವುದು ಎಂಬ ಆತಂಕದಲ್ಲಿದ್ದಾರೆ.
ಒಣಗುತ್ತಿವೆ ಬೆಳೆ: ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾದ ಬಹುತೇಕ ಬೆಳೆಗಳು ಬತ್ತಿಹೋಗುತ್ತಿವೆ. ಜುಲೈನಲ್ಲಿ 10 ದಿನಗಳ ಕಾಲ ಸುರಿದ ಮಳೆ ಕೆರೆಕಟ್ಟೆಗಳನ್ನು ಒಂದಷ್ಟು ತಣಿಸಿದರೆ, ನಂತರದಲ್ಲಿ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಆಗಸ್ಟ್‌ನಲ್ಲಿ ತಾಲೂಕಿನಾದ್ಯಂತ ಶೇ.85ರಷ್ಟು ಮಳೆ ಕೊರತೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ ಕೃಷಿ ಇಲಾಖೆ ವರದಿ ಪ್ರಕಾರ ಬಿತ್ತನೆ ಪ್ರಮಾಣ ಹೆಚ್ಚಾಗಿ ಬೆಳೆ ಆಳೆತ್ತರಕ್ಕೆ ಬೆಳೆದು ತೆನೆ ಬಿಟ್ಟಿದ್ದವು. ಆದರೆ ಈಗಾಗಲೇ ಬಿತ್ತನೆಯಾಗಿರುವ ಹೈಬ್ರೀಡ್ ಜೋಳ, ಮೆಕ್ಕೆಜೋಳ, ಶೇಂಗಾ ಬೆಳೆಗಳು ಜಮೀನನಲ್ಲಿ ಒಣಗುತ್ತಿವೆ. ಕೆಲವೆಡೆ ಬೆಳೆದು ನಿಂತ ಬೆಳೆ ಕಾಳುಕಟ್ಟುವ ಮೊದಲೇ ಒಣಗುತ್ತಿವೆ. ಇನ್ನೂ ಕೆಲವು ರೈತರು ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದು, ಬಿತ್ತನೆಯನ್ನೇ ಮಾಡಿಲ್ಲ.
ಹಳೆಯ ಹುಲ್ಲು ಖಾಲಿ:
ಕಳೆದ ವರ್ಷ ರಾಗಿ ಬೆಳೆ ಉತ್ತಮವಾಗಿತ್ತು. ದಾಸ್ತಾನು ಇಟ್ಟಿದ್ದ ರಾಗಿ ಹುಲ್ಲು ಬಹುತೇಕ ಕಡೆ ಖಾಲಿಯಾಗುತ್ತಿದೆ. ಈ ವರ್ಷವೂ ಉತ್ತಮ ಮಳೆಯಾಗಲಿದೆ ಎಂಬ ಆಶಾಭಾವನೆಯಿಂದ ದಾಸ್ತಾನಿಟ್ಟ ಹುಲ್ಲನ್ನು ಖಾಲಿ ಮಾಡಿಕೊಂಡಿರುವ ರೈತರಿಗೆ ಮಳೆರಾಯ ಶಾಕ್ ನೀಡಿದ್ದು, ಒಣಹುಲ್ಲು ಖಾಲಿ ಮಾಡಿಕೊಂಡವರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಬಹುತೇಕ ಕಡೆ ಹುಲ್ಲು ಕೆಲವೇ ದಿನಗಳಿಗಾಗುವಷ್ಟು ಇದೆ.
ಈಗಿರುವ ದಾಸ್ತಾನು: ಪ್ರಸ್ತುತ 36 ವಾರಕ್ಕೆ ಆಗುವಷ್ಟು 1,38,992 ಟನ್ ಮೇವನ್ನು ಪಶುಪಾಲನಾ ಇಲಾಖೆ ದಾಸ್ತಾನು ಇಟ್ಟಿದೆ. ಇದರಿಂದ 2020ರ ಜಾನುವಾರು ಗಣತಿಯಂತೆ ತಾಲೂಕಿನಲ್ಲಿರುವ 1,64,669 ಜಾನುವಾರುಗಳಿಗೆ (ಕುರಿ, ಮೇಕೆ ಸಹಿತ) ಒಂದು ದಿನಕ್ಕೆ ಸುಮಾರು 3858 ಕೆ.ಜಿ ಮೇವು ನೀಡಬಹುದು. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಬೀರೂರು, ಬಿಳುವಾಲ, ಎಮ್ಮೆದೊಡ್ಡಿ, ಬಾಸೂರು ನರ್ಸರಿಗಳಲ್ಲಿ ಮೇವಿನ ಬೀಜ ಬಿತ್ತನೆ ಮಾಡಲಾಗಿದೆ.
ಪೂರ್ವ ತಯಾರಿ ಸಭೆ: ಆಗಸ್ಟ್ ಮುಗಿಯುತ್ತಿದ್ದರೂ ಸಮರ್ಪಕ ಮಳೆ ಬಾರದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಶು ಇಲಾಖೆ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಅಧಿಕಾರಿಗಳ ತಂಡ, ಪಶು ವೈದ್ಯರು ಎರಡು ದಿನಗಳ ಹಿಂದೆ ಆಂತರಿಕವಾಗಿ ಸಭೆ ನಡೆಸಿದ್ದಾರೆ. ಸಮಸ್ಯೆ ಬಿಗಾಡಿಯಿಸುವ ಮುನ್ನ ಪರಿಹಾರಕ್ಕಾಗಿ ಹಲವು ಮಾರ್ಗೋಪಾಯಗಳ ಬಗ್ಗೆ ಸೂಚಿಸಿದ್ದಾರೆ. ಮುಖ್ಯವಾಗಿ ಗೋಶಾಲೆಗಳಲ್ಲಿ ನೀರು, ಮೇವು ಬ್ಯಾಂಕ್ ಮತ್ತು ಮೇವಿನ ಬೀಜ ಬೇಡಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಮಳೆ ಕೊರತೆಯಿಂದ ಮೇವಿನ ಸಮಸ್ಯೆ ಉದ್ಭವಿಸಲಿದೆ. ಜಾನುವಾರುಗಳಿಗೆ ಸಮಸ್ಯೆ ಆಗದಂತೆ ಇಲಾಖೆ ವ್ಯಾಪ್ತಿಯ ನರ್ಸರಿಗಳಲ್ಲಿ ಮೇವು ಬೆಳೆಯಲಾಗುತ್ತಿದೆ. 36 ವಾರಕ್ಕೆ ಆಗುವಷ್ಟು ಮೇವು ದಾಸ್ತಾನಿದೆ. ಕೊರತೆ ಆಗದಂತೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಅಗತ್ಯ ಕ್ರಮ ಅನುಸರಿಸಲಾಗುತ್ತದೆ ಎಂದು ಕಡೂರು ಪಶುಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಬಿ.ಉಮೇಶ್ ವಿಜಯವಾಣಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net