ಕಾಡು ಪ್ರಾಣಿಗಳಿಂದ ಬೆಳೆ ನಷ್ಟ

21-KGL-4
Published on

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಹೊರವಲಯದ ಗುಂಡಾಲ್ ಜಲಾಶಯ ವ್ಯಾಪ್ತಿಯ ಜಮೀನಿನಲ್ಲಿ ಕಾಡುಹಂದಿಗಳು ಹಾನಿ ಮಾಡಿರುವ ಭತ್ತದ ಫಸಲಿಗೆ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಬಿ.ಆರ್.ಟಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ರೈತ ಮುಖಂಡರು ದೊಡ್ಡಿಂದುವಾಡಿ ಗ್ರಾಮದ ರೈತ ಮಾದೇಶ್ ಎರಡು ಎಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲು ಹಾಗೂ ಆರ್.ವೆಂಕಟೇಶ್ ಐದು ಎಕರೆಯಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಫಸಲನ್ನು ಕಾಡು ಹಂದಿಗಳು ನಾಶ ಮಾಡಿವೆ ಎಂದು ದೂರು ನೀಡಿದ್ದಾರೆ.

ಹತ್ತು ವರ್ಷಗಳಿಂದ ಗುಂಡಾಲ್ ಜಲಾಶಯ ವ್ಯಾಪ್ತಿಯ ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳ ಮೇಲೆ ಆಗಾಗ್ಗೆ ಕಾಡುಪ್ರಾಣಿಗಳ ಹಾವಳಿ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಕ್ರಮ ಜರುಗಿಸುತ್ತಿಲ್ಲ. ಆದ್ದರಿಂದ ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು. ಕಾಡುಪ್ರಾಣಿ ಹಾವಳಿಯನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಅಧ್ಯಕ್ಷ ಮಾದೇಶ್, ಕಾರ್ಯದರ್ಶಿ ಆರ್.ವೆಂಕಟೇಶ್, ಸದಸ್ಯರಾದ ಬಲನಿಂಗಶೆಟ್ಟಿ, ಶ್ರೀನಿವಾಸ್, ಮಾದೇಶ್, ರಾಚಪ್ಪ, ದಿಲೀಪ್ ಕುಮಾರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net