

ಬೆಂಗಳೂರು: ನಿರಂತರ ಮಳೆಯಿಂದ ಅನೇಕ ಬೆಳೆಗಳು ಹಾನಿ ಗಮನಕ್ಕಿದೆ. ಉತ್ಪಾದನಾ ವೆಚ್ಚ ಹೆಚ್ಚಳವೂ ಗೊತ್ತಿದೆ. ಬೆಳೆ ನಷ್ಟ ಪರಿಹಾರ ಮೊತ್ತ ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳುವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗ ಗುರುವಾರ ಭೇಟಿ ಮಾಡಿ ಸಲ್ಲಿಸಿದ ಮನವಿಗೆ ಸಿಎಂ ಪ್ರತಿಕ್ರಿಯಿಸಿ, ಕಲಬುರಗಿಗೆ ಹೋದಾಗ ಹಾನಿಗೀಡಾದ ತೊಗರಿ ಬೆಳೆಯನ್ನು ರೈತರು ತಂದು ತೋರಿಸಿದ್ದು, ಬಾಧಿತ ರೈತರಿಗೆ ಸಾಧ್ಯವಾದಷ್ಟು ನೆರವು ನೀಡುವೆ ಎಂದಿದ್ದಾರೆ.
ಅತಿವೃಷ್ಟಿಯಿಂದ ಬೆಳೆ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನಿರ್ಧರಿಸಿ ಖುಷ್ಕಿ ಎಕರೆಗೆ 25 ಸಾವಿರ ರೂ, ನೀರಾವರಿಗೆ 40 ಸಾವಿರ ರೂ. ಪರಿಹಾರ, ಕೆಐಎಡಿಬಿ 25 ವರ್ಷವಾದರೂ ಬಳಸದೆ ಖಾಲಿ ಬಿಟ್ಟಿರುವ ಜಮೀನು ರೈತರಿಗೆ ವಾಪಸ್ ನೀಡಬೇಕು.
ಕಬ್ಬು ಉತ್ಪನ್ನ ವೆಚ್ಚ ಹೆಚ್ಚಾಗಿದ್ದರೆ, 2025-26ನೇ ಸಾಲಿನ ಎ್ಆರ್‌ಪಿ ದರ ಸಮಂಜಸವಾಗಿಲ್ಲ. ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ ನಿಗದಿ, 2023-24ನೇ ಸಾಲಿನಲ್ಲಿ ಕಬ್ಬಿಗೆ ಹೆಚ್ಚುವರಿಯಾಗಿ ನಿಗದಿಪಡಿಸಿದ್ದ ಟನ್‌ಗೆ 150 ರೂ.ನಂತೆ ಒಟ್ಟು 900 ಕೋಟಿ ರೂ.ಗಳನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ ಕೊಡಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ನಿಯೋಗ ಒತ್ತಾಯಿಸಿತು.
ಈ ನಿಯೋಗದಲ್ಲಿ ಮುಖಂಡರಾದ ಬಲ್ಲೂರ್ ರವಿಕುಮಾರ್, ರವಿಕುಮಾರ್ ಗದಗ, ಅತ್ತಹಳ್ಳಿ ದೇವರಾಜ, ಎನ್.ಎಚ್.ದೇವಕುಮಾರ್, ಬರಡನಪುರ ನಾಗರಾಜ್ ಇನ್ನಿತರರು ಇದ್ದರು.