

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಮಳೆಗೆ ಹಾನಿಗೀಡಾದ 5.29 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗೆ ಪರಿಹಾರ ಪಾವತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ಮೊದಲ ಹಂತದ ಜಂಟಿ ಸಮೀಕ್ಷೆ ಪೂರ್ಣಗೊಂಡು ಒಂಭತ್ತು ಜಿಲ್ಲೆಗಳ 5.29 ಲಕ್ಷ ಹೆಕ್ಟೇರ್ ಬೆಳೆ ಹಾನಿ ವರದಿ ಸಿದ್ಧವಾಗಿತ್ತು. ಇನ್ನೇನು ಪರಿಹಾರ ಪಾವತಿ ಶುರು ಮಾಡಬೇಕು ಎನ್ನುವಷ್ಟರಲ್ಲಿ ನಾಲ್ಕು ಜಿಲ್ಲೆಗಳು ಅತಿವೃಷ್ಟಿ ಜತೆಗೆ ಪ್ರವಾಹ ಎದುರಿಸಿವೆ.
ಮಹಾರಾಷ್ಟ್ರ ಜಲಾಶಯಗಳಿಂದ ಹರಿಸಿದ ಹೆಚ್ಚುವರಿ ನೀರು ಪ್ರವಾಹಕ್ಕೆ ಕಾರಣವಾದರೆ, ಅತಿವೃಷ್ಠಿ ಪರಿಣಾಮ ಬೆಳೆಗಳು ಜಲಾವೃತವಾದವು. ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 7.24 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುವುದು ಕಂಡು ಬಂದಿದೆ.
ನಾಲ್ಕು ಜಿಲ್ಲೆಗಳ ಬೆಳೆ ಹಾನಿ ಜಂಟಿ ಸಮೀಕ್ಷೆ 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ವರದಿ ಸಲ್ಲಿಸಿದ ಬಳಿಕ ಎರಡನೇ ಹಂತದ ಪರಿಹಾರ ಪಾವತಿಗೆ ಕ್ರಮವಹಿಸಲಾಗುತ್ತದೆ.
ನೈಋತ್ಯ ಮುಂಗಾರಿನಲ್ಲಿ ಒಟ್ಟಾರೆ 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಎರಡನೇ ಹಂತದ ಜಂಟಿ ಸಮೀಕ್ಷೆ ವರದಿ ಸಲ್ಲಿಕೆಯಾದ ನಂತರ ವಾಸ್ತವಿಕ ಬೆಳೆ ಹಾನಿ ತಿಳಿಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಳೆ ಪರಿಹಾರ ಪಾವತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯಾಗಲಿದ್ದು, ತ್ವರಿತವಾಗಿ ಪಾವತಿ ಸಾಧ್ಯವಾಗಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಪ್ರದೇಶದ ಬೆಳೆ ಹಾನಿಗೆ ಪರಿಹಾರ ಪಾವತಿ ಮೊತ್ತ ಎರಡು ಸಾವಿರ ಕೋಟಿ ರೂ.ಗಳಾಗಲಿದೆ. ಎನ್‌ಡಿಆರ್‌ಎ್ ಮಾರ್ಗಸೂಚಿ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿ ಮೊತ್ತವನ್ನು ಸೇರಿಸಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.