ಬೆಳೆ ಹಾನಿ ಸಮೀಕ್ಷೆ ಶೀಘ್ರವಾಗಲಿ

skp meeting
ಶಿಕಾರಿಪುರದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಮಳೆಹಾನಿ ಮತ್ತು ಪರಿಹಾರ ಕಾರ್ಯ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಲ್ಲೇಶ್ ಪೂಜಾರ್, ತಾಪಂ ಇಒ ನಾಗರಾಜ್, ಕಿರಣ್‌ಕುಮಾರ್ ಹರ್ತಿ ಮತ್ತಿತರರು ಇದ್ದರು.
Published on

ಶಿಕಾರಿಪುರ: ತಾಲೂಕಿನಲ್ಲಿ ಅಕಾಲಿಕ ಮತ್ತು ಮುಂಗಾರು ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ವೈ.ವಿಜಯೇಂದ್ರ ಸೂಚಿಸಿದರು.

ಮಳೆಯಿಂದ ಬೆಳೆ, ಸಾರ್ವಜನಿಕ ಸ್ವತ್ತುಗಳ ಹಾನಿ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಪಂ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿದ ಅವರು, ಮನೆ, ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಜತೆಗೆ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಜಲಾಶಯಗಳು, ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕೆರೆಗಳಲ್ಲಿ ಈಜಾಡದಂತೆ, ಸೆಲ್ಫೀ ತೆಗೆದುಕೊಳ್ಳುವಾಗ ಜೀವಹಾನಿ ಆಗುವ ಸಾಧ್ಯತೆಗಳಿರುತ್ತವೆ. ಜನರು, ಪ್ರವಾಸಿಗರಲ್ಲಿ ಅರಿವು ಮೂಡಿಸಬೇಕು. ಪಟ್ಟಣದ ಹಲವೆಡೆ ಮತ್ತು ಹೊನ್ನಾಳಿ ರಸ್ತೆ ಹಾಳಾಗಿದೆ. ಈಸೂರು ಹೆಗ್ಗೇರಿ ಕೆರೆ ಬಗ್ಗೆ ಗಮನಹರಿಸಬೇಕು. ಶಾಲಾ ಕಾಲೇಜುಗಳು, ಅಂಗನವಾಡಿ, ಹಾಸ್ಟೆಲ್ಗಳ ಕಟ್ಟಡಗಳು ಹಾಳಾಗಿದ್ದರೆ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.

ಜನವಸತಿ ಪ್ರದೇಶದಲ್ಲಿ ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳು ಹಾಳಾಗಿದ್ದರೆ ಮೊದಲು ಅವುಗಳನ್ನು ಸರಿಪಡಿಸುವ ಕೆಲಸ ಮಾಡಿ. ಕಂಬಗಳ ಮೇಲೆ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ಬಗ್ಗೆ ಗಮನಹರಿಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಗಳನ್ನು ದಾಸ್ತಾನು ಮಾಡಬೇಕು ಎಂದು ತಿಳಿಸಿದರು.

15 ದಿನಗಳಿಂದ ಚಾನಲ್ಗಳಲ್ಲಿ ನೀರು ಬಿಡಲಾಗಿದೆ. ಭತ್ತ ನಾಟಿಗೆ ಪೂರಕ ವಾತಾವರಣವಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ಬಿಇಒ ಲೋಕೇಶ್ವರಪ್ಪ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಶಾಲೆಗಳಿಗೆ ಹಾನಿಯಾಗಿಲ್ಲ. ಮಳೂರು ಹಾಗೂ ಹಾರೋಗೋಪ್ಪ ಬಿ ಕ್ಯಾಂಪ್ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕೊಠಡಿಗಳು ಬಿದ್ದಿವೆ. ಬೇರೆ ಕೊಠಡಿಗಳಲ್ಲಿ ಪಾಠ ನಡೆಯುತ್ತಿದೆ. ಹೊಸ ಕೊಠಡಿಗಳಿಗೆ ಅನುದಾನಕ್ಕೆ ಮನವಿ ಮಾಡಿದ್ದೇನೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಧನ್ಯಾ ನಾಯಕ್ ಮಾತನಾಡಿ, 25 ಅಂಗನವಾಡಿ ಕೇಂದ್ರಗಳಲ್ಲಿ ನೀರು ಸೋರುತ್ತಿದೆ. 4 ಕೇಂದ್ರಗಳನ್ನು ಸ್ಥಳಾಂತರಿಸಲಾಗಿದೆ ಎಂದರು. ಆರೋಗ್ಯ ಇಲಾಖೆಯ ಸುರೇಶ್ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಸಾಕಷ್ಟಿದೆ. ನಾಯಿಗಳ ಕಡಿತಕ್ಕೆ ಚಿಕಿತ್ಸೆ ಮತ್ತು ಪೂರಕವಾದ ಔಷಧ ಲಭ್ಯವಿದೆ ಎಂದು ತಿಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net