ತಾಲೂಕಿನ ಬೂದಿಹಾಳ ಗ್ರಾಮದ ವ್ಯಾಪ್ತಿಯಲ್ಲಿ ಕೊಣ್ಣೂರಿನ ಬಸು ಬಾಗೇವಾಡಿ, ನಾಗಪ್ಪ ಮರ್ಚಪ್ಪನವರ, ಲಚ್ಚಣ್ಣ ಹೆಬಸೂರ ಎಂಬುವರ ಜಮೀನಿನ ಪಕ್ಕದಲ್ಲಿರುವ ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷಗೊಳ್ಳುತ್ತಿದೆ. ಎರಡು ಅಡಿ ಆಳವಿರುವ ನದಿ ನೀರಿನಲ್ಲಿ 7 ಅಡಿ ಉದ್ದದ ಮೊಸಳೆ ಎರಡು ದಿನಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿದೆ. ರೈತರು ಪಂಪ್‌ಸೆಟ್ ಮೂಲಕ ಮಲಪ್ರಭಾ ನದಿ ನೀರನ್ನೇ ನಂಬಿ ಕೃಷಿ, ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಬ್ಬು, ಪೇರಲ, ಬಾಳೆ, ತೆಂಗಿನ ಗಿಡಗಳಿಗೆ ನಿರಂತರ ನೀರು ಹಾಯಿಸಲು ಹೋಗುವ ರೈತರು, ಕೃಷಿ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು, ಕುರಿ, ಮೇಕೆ, ಜಾನುವಾರುಗಳನ್ನು ಮೇಯಿಸಲು ಹೋಗುವವರು ಮೊಸಳೆ ಭಯದಿಂದ ನದಿದಡಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೊಣ್ಣೂರಿನ ಮಲಪ್ರಭಾ ನದಿಯೂ ನರಗುಂದ ಮತ್ತು ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳ ಸರಹದ್ದುಗಳಿಗೆ ಸಂಬಂಧಿಸಿದ ರೈತರ ಜಮೀನುಗಳ ಪಕ್ಕದಲ್ಲಿ ಹರಿಯುತ್ತದೆ. ಆಹಾರಕ್ಕಾಗಿ ಮೊಸಳೆ ನರಗುಂದ ಸರಹದ್ದಿಗೆ ಆಗಮಿಸಿದರೆ, ಮೈಕೊರೆಯುವ ಚಳಿಯಿಂದ ಆಗಾಗ ಮೈಬಿಸಿ ಮಾಡಿಕೊಳ್ಳಲು ಅಥವಾ ಮೊಟ್ಟೆಗಳಿಗೆ ಕಾವು ನೀಡಲು ಬಾದಾಮಿ ತಾಲೂಕಿನ ಕಳಸ ಗ್ರಾಮದ ಸರಹದ್ದಿನ ಮರಳಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಮೊಸಳೆ ಚಲನವಲನವನ್ನು ರೈತ ಲಕ್ಷ್ಮಣ ಹೆಬಸೂರ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸುವ ಮುನ್ನವೇ ಮೊಸಳೆ ಸೆರೆ ಹಿಡಿಯುವಂತೆ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಜನರು ಮನವಿ ಮಾಡಿದ್ದಾರೆ.
ಕೊಣ್ಣೂರಿನ ಮಲಪ್ರಭಾ ನದಿಯಲ್ಲಿ ಈವರೆಗೆ ಮೊಸಳೆ ಪ್ರತ್ಯಕ್ಷಗೊಂಡಿರುವ ಉದಾಹರಣೆಗಳಿಲ್ಲ. ಆಳವಾದ ನೀರು ಸಂಗ್ರಹಗೊಂಡಿದ್ದರೆ ಅದು ವಾಸಿಸುತ್ತಿರಬಹುದು. ನೀರು ನಿರಂತರ ಹರಿಯುತ್ತಿದ್ದರೆ ಅದು ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಿಲ್ಲ. ಮೊಟ್ಟೆ ಇಟ್ಟಿದ್ದರೆ ಕಾವು ಕೊಡಲು ಅದು ಆಗಾಗ ಮರಳಿನಲ್ಲಿ ಕಾಣಿಸಿಕೊಂಡಿರಬಹುದು. ಮುಂಜಾಗ್ರತೆ ಕ್ರಮವಾಗಿ ಬೂದಿಹಾಳ ಬಳಿ ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಡಿ. 21ರಂದು ಭೇಟಿ ನೀಡಿ ಪರಿಶೀಲಿಸುತ್ತೇನೆ. ಮೊಸಳೆ ಸಿಗದಿದ್ದರೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನದಿತೀರದ ಅಲ್ಲಲ್ಲಿ ಎಚ್ಚರಿಕೆಯ ನಾಮಫಲಕ ಅಳವಡಿಸಲಾಗುವುದು. ರಾಘವೇಂದ್ರ ಎಚ್.ಎ., ವಲಯ ಅರಣ್ಯಾಧಿಕಾರಿ ನರಗುಂದ