

ಬೆಂಗಳೂರು: ‘ಮುಗ್ಧ ಮೊಸಳೆ’- ‘ಬುದ್ಧಿವಂತ ಕತ್ತೆ’.... ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಬಿಜೆಪಿ ನಡುವೆ ನಡೆದಿರುವ ಇಂಥದ್ದೊಂದು ವಿಚಿತ್ರ ರಾಜಕೀಯ ಟೀಕೆ-ಪ್ರತಿಟೀಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.
ವಿಚಿತ್ರವೆಂದರೆ ‘ಮೊಸಳೆ ಮುಗ್ಧ’ ಎಂದು ಕೇವಲ ಎರಡು ಪದದ ಟೀಕೆಯನ್ನು ರಾಹುಲ್ ಗಾಂಧಿ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಮಾಡಿದ್ದಾರೆ. ಮೊಸಳೆ ಮುಗ್ಧವಲ್ಲ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ಪದ ಬಳಕೆಯಿಂದ ಅವರು ತನ್ನ ಎದುರಾಳಿಯನ್ನು ಕೆಣಕಿದ್ದಾರೆಂಬುದು ದಿಟ. ತಾನು ಹೇಳಬೇಕಾದ್ದನ್ನು ಅತಿ ಬುದ್ಧಿವಂತಿಕೆಯಿಂದ ಇಲ್ಲಿ ಮಾಡಿದ್ದಾರೆ. ಸಾಮಾನ್ಯವಾಗಿ ಅವರು ಪ್ರತಿ ದಿನ ಹೆಚ್ಚಿನದಾಗಿ ಪ್ರಧಾನಿ ಮೋದಿ ವಿರುದ್ಧವೇ ಟೀಕೆ ಮಾಡುತ್ತಿರುತ್ತಾರೆ. ಪ್ರತಿ ಎರಡು ಟ್ವೀಟ್ ಮೂಲಕ ರಾಜಕಾರಣ ಮಾಡುತ್ತಿದ್ದಾರೆಂಬ ವ್ಯಂಗ್ಯಭರಿತ ಟಿಪ್ಪಣಿಯೂ ಅವರ ಕುರಿತಾಗಿದೆ.
ಅಂದ ಹಾಗೆ, ರಾಹುಲ್ ಗಾಂಧಿ ಟ್ವೀಟ್‌ಗೆ ಕೌಂಟರ್ ನೀಡಿರುವ ಕರ್ನಾಟಕ ಬಿಜೆಪಿ ಇನ್ನಷ್ಟು ಬುದ್ಧಿವಂತಿಕೆ ಪ್ರದರ್ಶಿಸಿದೆ. ‘ಬುದ್ಧಿವಂತ ಕತ್ತೆ’ ಎಂದು ತಾನೂ ಎರಡೇ ಪದಗಳಲ್ಲಿ ಟಾಂಗ್ ನೀಡಿದೆ. ನೇರವಾಗಿ ಯಾರನ್ನೂ ಎಳೆದು ತರದೇ ಪರೋಕ್ಷ ಪದಗಳಲ್ಲೇ ಬಿಸಿ ಮುಟ್ಟಿಸಿದೆ. ದಡ್ಡತನವನ್ನು ಸಾಮಾನ್ಯವಾಗಿ ಕತ್ತೆಗೆ ಹೋಲಿಸುವುದು ವಾಡಿಕೆ. ಇಲ್ಲಿ ಯಾರನ್ನು ಉದ್ದೇಶಿಸಿ ರಾಹುಲ್ ಕೆಣಕಿದ್ದರೋ, ಬಿಜೆಪಿ ಅದೇ ಧಾಟಿಯಲ್ಲಿ ತಿರುಗೇಟು ನೀಡಿರುವುದು ಗಮನಾರ್ಹವಾಗಿದೆ.