

ಮುಂದುವರಿದ ಭಾಗ..
ಮೊಸಳೆ ಮೊಟ್ಟೆ ಇಡಲು ನೆಲದ ಮೇಲೆ ಬರಬೇಕು. ಗರ್ಭಿಣಿಯಾದ ನಂತರ, ಕೆಲವು ಜಾತಿಯ ಮೊಸಳೆ ಮೂರು ವಾರದಲ್ಲಿ ಮೊಟ್ಟೆ ಇಡುತ್ತವೆ, ಕೆಲವಕ್ಕೆ ಆರು ವಾರ ಬೇಕಾಗುತ್ತದೆ. ಇವು ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದಿಲ್ಲ. ಹೀಗಾಗಿ ಮೊಟ್ಟೆಗಳು ಮರಿಗಳಾಗಲು ಪ್ರಕೃತಿಯ ಉಷ್ಣಾಂಶವನ್ನೇ ಅವಲಂಬಿಸಿವೆ.
ಮೊಟ್ಟೆ ಇಡುವ ಸಂದರ್ಭದಲ್ಲಿ ದಡದ ಮರಳಿನಲ್ಲಿ ಗುಂಡಿಯನ್ನು ತೋಡಲು ಆರಂಭಿಸುತ್ತವೆ. ಅಂದಾಜು ಒಂದೆರಡು ಅಡಿ ಆಳ ಗುಂಡಿ ತೆಗೆದು ಅದರಿಂದ ಹೊರಹೊಮ್ಮುವ ಶಾಖವನ್ನು ಪರಿಶೀಲಿಸಿ, ಉಷ್ಣಾಂಶ ಸರಿ ಇಲ್ಲ ಎಂದರೆ ಪುನಃ ಮತ್ತೊಂದು ಗುಂಡಿಯನ್ನು ತೆಗೆದು ಅಲ್ಲಿ ಮೊಟ್ಟೆ ಇಡುತ್ತವೆ. ಇಂಥ ಸ್ಥಳದಲ್ಲಿ ಮರಳು ಗಣಿಗಾರಿಕೆ ನಡೆಸಿದರೆ ಮೊಸಳೆ ಸಂತತಿಗೆ ಅಪಾಯ.
ತಾನು ಮೊಟ್ಟೆ ಇಡುತ್ತಿರುವುದು ಬೇರೆ ಇತರ ಪ್ರಾಣಿಗಳಿಗೆ ತಿಳಿಯದೇ ಇರಲಿ ಎಂದುಕೊಂಡು, ಬಹುತೇಕ ಮೊಸಳೆಗಳು ರಾತ್ರಿಯ ಸಮಯದಲ್ಲಿ ದಡಕ್ಕೆ ಬಂದು ಗುಂಡಿ ತೋಡಿ 30-40 ನಿಮಿಷಗಳ ಅಂತರದಲ್ಲಿ ಅಂದಾಜು 50 ರಿಂದ 100 ಮೊಟ್ಟೆ ಇಟ್ಟು ಗುಂಡಿಯನ್ನು ಮುಚ್ಚುತ್ತವೆ. ನಂತರ 65-95 ದಿವಸಗಳ ಅಂತರದಲ್ಲಿ ಮರಿಗಳು ಹುಟ್ಟುತ್ತವೆ.