

ಮುಂದುವರಿದ ಭಾಗ...
ಮೊಸಳೆ ಸರೀಸೃಪ ಮತ್ತು ಮಾಂಸಾಹಾರಿ, ಇದು ಡೈನೋಸರ್ನ ಸೋದರ ಸಂಬಂಧಿ. ಮೊಸಳೆ ಕಳೆದ ಇಪ್ಪತ್ತು ಕೋಟಿ ವರ್ಷಗಳ ಅಂತರದಲ್ಲಿ ಹಲವಾರು ಪ್ರಳಯಗಳನ್ನು ಎದುರಿಸಿ ಬದುಕಿ 23 ಉಪಜಾತಿಗಳಾಗಿ ವಿಂಗಡಣೆಯಾಗಿ ವಿಕಾಸಗೊಂಡಿವೆ. ಇವುಗಳ ಉಪಜಾತಿಯ ಆಕಾರ, ರೂಪ, ಅಭ್ಯಾಸಗಳು ಮತ್ತು ಜೀವನಶೈಲಿಯಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಕೆಲವು ಸಿಹಿ ನೀರಿನಲ್ಲಿ ವಾಸಿಸುತ್ತವೆ, ಇನ್ನು ಕೆಲವು ಉಪ್ಪು ನೀರಿನಲ್ಲಿ ವಾಸಿಸುತ್ತವೆ, ಕೆಲವು ಗಲೀಜು ನೀರಿನಲ್ಲಿ ವಾಸಿಸುತ್ತವೆ. ಇವು ಅಂದಾಜು ಐನೂರರಿಂದ ಸಾವಿರ ಕೆ.ಜಿ. ತೂಕ ಹೊಂದಿರುತ್ತವೆ.
ಇವುಗಳು ಬೇಟೆಯಾಡುವುದಲ್ಲದೆ ನೀರಿನಲ್ಲಿ ಸತ್ತ ಪ್ರಾಣಿಗಳ ದೇಹವನ್ನು ತಿಂದು ನೀರನ್ನು ಸ್ವಚ್ಛ ಮಾಡುತ್ತವೆ. ಇತರ ಪ್ರಾಣಿಗಳು ನದಿಯ ನೀರನ್ನು ದಾಟುವಾಗ ಕಾರಣಾಂತರಗಳಿಂದ ಸತ್ತುಹೋಗುತ್ತವೆ. ಆ ದೇಹವು ನೀರಿನಲ್ಲಿ ಕರಗಿ ನೀರನ್ನು ಕಲುಷಿತಗೊಳಿಸುತ್ತದೆ ಮತ್ತು ಹಲವು ಕಿ.ಮೀ. ದೂರದವರೆಗೆ ತೇಲಿ ಬರುತ್ತವೆ. ಅಂತಹ ಕೊಳೆತ ದೇಹವನ್ನು ಈ ಮೊಸಳೆಗಳು ತಿನ್ನುತ್ತವೆ. ಕೆಲವೊಮ್ಮೆ ಸತ್ತ ದೇಹದಲ್ಲಿ ಹಲವು ರೀತಿಯ ಬ್ಯಾಕ್ಟೀರಿಯ, ಕ್ರಿಮಿ ಕೀಟಗಳು ಉತ್ಪಾದನೆಯಾಗಿ ವಾಸನೆ ಬರಲಾರಂಬಿಸಿದ ಮೇಲೆ ಅದನ್ನು ತಿನ್ನುತ್ತವೆ. ಕೊಳೆತ ದೇಹವನ್ನು ಮೊಸಳೆಗಳು ತಿಂದು ಕರಗಿಸಿ ನದಿಯ ನೀರನ್ನು ಶುದ್ಧಗೊಳಿಸುತ್ತವೆ.