ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರ ಟೀಕೆ

Congress
Published on

ಬೆಂಗಳೂರು: ಭದ್ರತಾ ವೈಫಲ್ಯದ ಬಗ್ಗೆ ಪ್ರಧಾನಮಂತ್ರಿಗಳು ಸದನದಲ್ಲಿ ಪ್ರತಿಕ್ರಿಯೆ ನೀಡದೇ, ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿ ಸಂಸತ್ತಿನ ಮೇಲೆ ದಾಳಿ ಆಘಾತಕಾರಿ ಎಂದಿದ್ದಾರೆ. ಸದನ ನಡೆಯುವಾಗ ಅವರು ಸದನದಲ್ಲಿ ತಮ್ಮ ಹೇಳಿಕೆ ದಾಖಲಿಸಬೇಕು. ಅದರ ಹೊರತಾಗಿ ಹೊರಗಡೆ ಹೇಳಿಕೆ ನೀಡುವುದು ಸಂಸದೀಯ ವ್ಯವಸ್ಥೆಗೆ ಮಾಡುವ ಅಪಚಾರವಾಗುತ್ತದೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಸದನದ ಹೊರಗೆ ಹೇಳಿಕೆ ನೀಡುತ್ತಿರುವಾಗ ಸದನದ ಒಳಗೆ ಯಾಕೆ ಹೇಳಿಕೆ ನೀಡುತ್ತಿಲ್ಲ. ಈ ವಿಚಾರವಾಗಿ ಗೃಹ ಸಚಿವರು ಯಾಕೆ ಹೇಳಿಕೆ ನೀಡುತ್ತಿಲ್ಲ. ಇದಕ್ಕೆ ಕಾರಣ ಅವರ ವೈಫಲ್ಯ ಎಂದು ಆರೋಪಿಸಿದರು.

ಇಡೀ ಘಟನೆ ನೇರಹೊಣೆಯನ್ನು ಪ್ರಧಾನಮಂತ್ರಿ ಹಾಗೂ ಗೃಹಸಚಿವರು ಹೊರಬೇಕು. ಸಂಸತ್ತಿನ ಐದು ಭದ್ರತಾ ವ್ಯವಸ್ಥೆ ದಾಟಿ ದಾಳಿ ನಡೆದಿರುವುದರ ಹೊಣೆಯನ್ನು ಸ್ಪೀಕರ್ ಹೊರಬೇಕಾಗುತ್ತದೆ. ಇದಕ್ಕೆ ಮೂಲವಾಗಿರುವ ಮೈಸೂರಿನ ಸಂಸದರು ಈ ದಾಳಿಕೋರರ ಬಗ್ಗೆ ಯಾವುದೇ ಹೇಳಿಕೆ ನೀಡದೆ ತಲೆಮರೆಸಿಕೊಂಡಿದ್ದಾರೆ. ಅವರ ಈ ನಡೆ ಅವರು ತಪ್ಪಿತಸ್ಥರು ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಹೇಳಿದರು.

ರಾಜ್ಯಸಭೆ ಮತ್ತು ಲೋಕಸಭೆಯ 92 ಸಂಸದರನ್ನು ಅಮಾನತು ಮಾಡಲಾಗಿದೆ. ಮೂರ್ನಾಲ್ಕು ಜನರ ಮೇಲೆ ಹಕ್ಕು ಬಾಧ್ಯತಾ ಸಮಿತಿಗೆ ಶಿಫಾರಸ್ಸು ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದರನ್ನು ಅನರ್ಹಗೊಳಿಸಿದರೋ ಅದೇ ರೀತಿ ಇವರನ್ನೂ ಅನರ್ಹಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಕಾಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಮಾತನಾಡಿ, ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಪ್ರಧಾನಮಂತ್ರಿಗಳು ಹೇಳುತ್ತಾರೆ. ಬಿಜೆಪಿಯವರು ಅಲ್ಪಸಂಖ್ಯಾತರನ್ನು ಯಾವುದೇ ಕಾರಣಕ್ಕೂ ತಮ್ಮ ಮಂತ್ರಿ ಮಂಡಲದಲ್ಲಿ ಇಟ್ಟುಕೊಳ್ಳುವುದಿಲ್ಲ. ಇದು ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರು.

ಸಣ್ಣ ಘಟನೆಯಾದರೂ ಮಾಧ್ಯಮಗಳ ಮುಂದೆ ಬರುತ್ತಿದ್ದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಸಿ.ಟಿ ರವಿ ಅವರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ, ಕರ್ನಾಟಕದ ಸಂಸದರು ಪ್ರಧಾನಿ ಭೇಟಿ ಮಾಡಿ ಇಲ್ಲಿನ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿದ್ದರು. ನನ್ನ ಪ್ರಕಾರ ಈಗ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಸಚಿವರುಗಳೇ ಪ್ರಧಾನಿ ಭೇಟಿ ಮಾಡುವುದಿಲ್ಲ. ಇದು ದೇಶಕ್ಕೆ ಅಘೋಷಿತ ತುರ್ತು ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net