ಸಿನಿಮಾ ಶೈಲಿಯಲ್ಲಿ ಬಾಲಕನ ಅಪಹರಣ; ಸಿಂಗಂ ಶೈಲಿಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು!

Kidnap
Published on

ಕಲಬುರಗಿ: ಸಿನಿಮಾ ಶೈಲಿಯಲ್ಲಿ ಶಾಲಾ ಬಾಲಕನ ಅಪಹರಣ ಮಾಡಿ ಹತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವಂತಹ ಘಟನೆಯೊಂದು ನಡೆದಿದೆ. ಸದ್ಯ ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯ ಸುದರ್ಶನ ಎಂಬ ಹತ್ತು ವರ್ಷದ ಬಾಲಕನನ್ನು ನಿನ್ನೆ(ಜ.04) ಮುಂಜಾನೆ ಅಪಹರಣ ಮಾಡಲಾಗಿತ್ತು. ಆರೋಪಿಗಳು ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಆಟೋದಲ್ಲಿ ಅಪಹರಣ ಮಾಡಿದ್ದರು.

ಬಾಲಕನ ತಂದೆ ಗುರುನಾಥ್ ರಾಠೋಡ್ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಅಪಹರಣದ ನಂತರ ಬಾಲಕನ ತಂದೆಗೆ ಕರೆ ಮಾಡಿ ನಿಮ್ಮ ಮಗ ಜೀವಂತವಾಗಿ ಬೇಕಾದರೆ ಹತ್ತು ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದರು ಮಗನನ್ನು ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.

ಕೂಡಲೇ ಬಾಲಕನ ತಂದೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಅಪಹರಣಕಾರರ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ. ಪೊಲೀಸರು ಬಾಲಕನ ಪತ್ತೆಗಾಗಿ ತಮ್ಮನ್ನು ಹಿಂಬಾಲಿಸುತ್ತಿರುವ ವಿಚಾರ ಅಪಹರಣಕಾರರಿಗೆ ಗೊತ್ತಾಗುತ್ತಿದ್ದಂತೆ, ನಿನ್ನೆ(ಜ.04) ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಬಾಲಕನನ್ನು ಕಲಬುರಗಿ ತಾಲೂಕಿನ ಪಾಳ ಗ್ರಾಮದ ಹೊರವಲಯದಲ್ಲಿ ಬಿಟ್ಟು ಅಪಹರಣಕಾರರು ಪರಾರಿಯಾಗಿದ್ದಾರೆ.

ವಿಶ್ವವಿದ್ಯಾಲಯ ಠಾಣೆ ಸಿಪಿಐ ಅರುಣ್ ಮುರಗುಡಿ ಮತ್ತು ತಂಡ ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಸದ್ಯ ಮಗು ಪೋಷಕರ ರಕ್ಷಣೆಯಲ್ಲಿದ್ದು, ಇದೀಗ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net