

ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನೀಲ್ ಬಿಜೆಪಿಗೆ ಸೇರ್ಪಡೆಯಾಗಿರುವ ಫೋಟೋಗಳು ಸಾಜಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಸೈಲೆಂಟ್ ಸುನಿಲ್ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಂತೆ, ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಆರೋಪ, ಪ್ರತ್ಯಾರೋಪಗಳಿಗೆ ಅವಕಾಶ ಮಾಡಿಕೊಟ್ಟಿತ್ತು.
ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರೌಡಿ ಸೈಲೆಂಟ್ ಸುನೀಲ ಜೊತೆಗೆ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ ಗರುಡಾಚಾರ್ ಭಾಗಿಯಾಗಿದ್ದರು. ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಸೈಲೆಂಟ್ ಸುನೀಲ ಜೊತೆಗೆ ಬಿಜೆಪಿ ಮುಖಂಡರು ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇಂದು ಬೆಳಗ್ಗೆ ಸೈಲೆಂಟ್ ಸುನಿಲ್ ಬಿಜೆಪಿ ಸದಸ್ಯತ್ವ ಪಡೆದುಕೊಂಡಿರುವುದ ಬಹಿರಂಗವಾಗುತ್ತಿದ್ದಂತೆ, ವಿಪಕ್ಷಗಳು ಟೀಕೆಗಳ ಸುರಿಮಳೆಗೈಯ್ಯುತ್ತಿವೆ. ಈ ಹಿಂದೆಯೂ ಸುನಿಲ್ ವಿಚಾರವಾಗಿ ಕಾಂಗ್ರೆಸ್ ಟೀಕಿಸುತ್ತಾ, ಬಿಜೆಪಿ ರೌಡಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ರೌಡಿ ಮೋರ್ಚಾ ಮಾಡಲು ಹೊರಟಿದೆ ಎಂದು ಹೇಳಿತ್ತು.
ಇದೀಗ ಬಿಜೆಪಿಗೆ ಸೈಲೆಂಟ್ ಸುನಿಲ್ ಎಂಟ್ರಿ ಕೊಡುತ್ತಿದ್ದಂತೆ ಮತ್ತೆ ಟ್ವೀಟ್ ಮೂಲಕ ಕಿಡಿಕಾರಿರುವ ಕಾಂಗ್ರೆಸ್, ಕುಖ್ಯಾತ ಪಾತಕಿ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ರೌಡಿ ಮೋರ್ಚಾಕ್ಕೆ ಬಹಿರಂಗವಾಗಿ ಚಾಲನೆ ದೊರೆತಿದೆ ಎಂದು ಹೇಳಿದೆ.
ಇದೇ ವೇಳೆ ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನಿಸುತ್ತಾ, ಯಾವುದೇ ಕಾರಣಕ್ಕೂ ರೌಡಿ ಶೀಟರ್ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ನೀವು, ನಿಮ್ಮ ನಾಲಿಗೆಯನ್ನು ಗೋಮೂತ್ರ ಅಥವಾ ಗೋಮಯದಲ್ಲಿ ತೊಳೆದುಕೊಳ್ಳುತ್ತೀರಾ ಎಂದು ಪ್ರಶ್ನಿಸಿದೆ.