ಸಿಬಿಐನಂತೆ ಸಿಐಡಿ ತನಿಖೆ: ಕ್ರಿಮಿನಲ್ ಇಂಟಲಿಜೆನ್ಸ್ ಯುನಿಟ್ ಸ್ಥಾಪನೆ; ಗಂಭೀರ ಅಪರಾಧಗಳ ಗುಪ್ತ ಮಾಹಿತಿ ಸಂಗ್ರಹ

CIU
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು 
ರಾಜ್ಯದ ಗಂಭೀರ ಮತ್ತು ಆರ್ಥಿಕ ಅಪರಾಧ ಪ್ರಕರಣಗಳ ತನಿಖೆ ಜವಾಬ್ದಾರಿ ವಹಿಸಿಕೊಂಡಿರುವ ಸಿಐಡಿಗೆ ಸಿಬಿಐ ಸ್ಪರ್ಶ ನೀಡಲಾಗಿದೆ. ಗಂಭೀರ ಅಪರಾಧ ಪ್ರಕರಣಗಳ ಗುಪ್ತ ಮಾಹಿತಿ ಸಂಗ್ರಹಕ್ಕಾಗಿ ಹೊಸದಾಗಿ ‘ಕ್ರಿಮಿನಲ್ ಇಂಟಲಿಜೆನ್ಸ್ ಯುನಿಟ್ (ಸಿಐಯು) ಸ್ಥಾಪಿಸಲಾಗಿದೆ. ಈ ಘಟಕದ ಮೂಲಕ ಪ್ರಕರಣದ ಸಾಕ್ಷ್ಯ ಸಂಗ್ರಹ, ಆರೋಪಪಟ್ಟಿ ಸಲ್ಲಿಕೆ, ಕೋರ್ಟ್ ವಿಚಾರಣೆ ಸೇರಿ ಇನ್ನಿತರ ವಿಚಾರಗಳನ್ನು ಸಿಬಿಐ ಮಾದರಿಯಲ್ಲಿ ಮೇಲ್ವಿಚಾರಣೆ ನಡೆಸಲಿದೆ.

ಪ್ರಸ್ತುತ ಸಿಐಡಿಯಲ್ಲಿ ಹಣಕಾಸು ಆರ್ಥಿಕ ಅಪರಾಧ, ಸೈಬರ್, ಇಂಟರ್​ಪೋಲ್- ಟೆಕ್ನಿಕಲ್ ಸಪೋರ್ಟ್, ಮಾನವ ಕಳ್ಳಸಾಗಣೆ ನಿಗ್ರಹ ಘಟಕ, ಖೋಟಾ ನೋಟು, ಮಾದಕ ವಸ್ತು ತಡೆ ವಿಭಾಗ ಮತ್ತು ಅರಣ್ಯ ಘಟಕಗಳಿವೆ. ಈಗ ಹೊಸದಾಗಿ ಸಿಐಯು ಸ್ಥಾಪಿಸಲಾಗಿದೆ. ಸಿಐಡಿ ಆಡಳಿತ ವಿಭಾಗಕ್ಕೆ ಎಸ್​ಪಿ ಮುಖ್ಯಸ್ಥರಾಗಿದ್ದು, ಬೆಂಗಳೂರು ನಗರ, ಮೈಸೂರು, ಕಲಬುರಗಿ, ದಾವಣಗೆರೆ, ಧಾರವಾಡ ಮತ್ತು ಮಂಗಳೂರಿನಲ್ಲಿ ಈ ವಿಭಾಗಗಳನ್ನು ರಚಿಸಲಾಗಿದೆ.

ಸಿಐಡಿಗೆ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುವ ಅಧಿಕಾರ ಇಲ್ಲ. ಸರ್ಕಾರ ಉನ್ನತ ತನಿಖೆ ಬಯಸಿದರಷ್ಟೇ ಸ್ಥಳೀಯ ಠಾಣೆಗಳಲ್ಲಿ ದಾಖಲಾಗಿರುವ ಎಫ್​ಐಆರ್ ಅನ್ನು ಸಿಐಡಿಗೆ ಹಸ್ತಾಂತರಿಸಲಾಗುತ್ತದೆ. ಆದರೆ, ಕೊಲೆ ನಡೆದ ಕೆಲವೇ ತಾಸಿನಲ್ಲಿ ಸಾಕ್ಷ್ಯಾಧಾರ ಸಂಗ್ರಹ ಮುಖ್ಯ. ಚಿಟ್ಸ್ ಫಂಡ್ ಮತ್ತು ಸೊಸೈಟಿಗಳ ವಂಚನೆ ಸೇರಿ ಆರ್ಥಿಕ ಅಪರಾಧಗಳಲ್ಲಿ ದಾಖಲೆಪತ್ರಗಳ ಸಂಗ್ರಹ ಪ್ರಮುಖ ಘಟ್ಟವಾಗಲಿದೆ. ಆದ್ದರಿಂದ ಗಂಭೀರ ಕೊಲೆ, ಆರ್ಥಿಕ ಮತ್ತು ಹಣಕಾಸಿನ ಅಪರಾಧಗಳು ದಾಖಲಾದ ಕೂಡಲೇ ಮಾಹಿತಿ ಸಂಗ್ರಹಕ್ಕೆ ಈ ಘಟಕ ಸ್ಥಾಪಿಸಲಾಗಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಎಲ್ಲೇ ಗಂಭೀರ ಅಪರಾಧ ಪ್ರಕರಣ ಸಂಭವಿಸಿದ ಕೂಡಲೇ ಸಿಐಯು ತಂಡ ಕಾರ್ಯಪ್ರವೃತ್ತವಾಗಲಿದೆ. ಸ್ಥಳೀಯ ಅಧಿಕಾರಿ ಮತ್ತು ತನಿಖಾಧಿಕಾರಿ ಜತೆಗೆ ಸಮನ್ವಯತೆ ಸಾಧಿಸಿ, ದಾಖಲೆ ಪತ್ರ ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಿದೆ. ಒಂದು ವೇಳೆ ಇದೇ ಪ್ರಕರಣವನ್ನು ಸರ್ಕಾರ ಹೆಚ್ಚುವರಿ ತನಿಖೆಗಾಗಿ ಸಿಐಡಿಗೆ ವಹಿಸಿದಲ್ಲಿ ಅಧಿಕಾರಿಗಳಿಗೆ ಅನುಕೂಲ ಆಗಲಿದೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಜೈನ ಮುನಿಗಳ ಕೊಲೆ ಮತ್ತು ಕಲಬುರಗಿಯಲ್ಲಿ ಮರಳು ಮಾಫಿಯಾಗೆ ಹೆಡ್ ಕಾನ್​ಸ್ಟೆಬಲ್ ಕೊಲೆ ಪ್ರಕರಣಗಳಲ್ಲಿ ಸಿಐಯು ಸಕ್ರಿಯವಾಗಿ ಕೆಲಸ ಮಾಡಿದೆ. ಇದೀಗ ಸಿಐಡಿಗೆ ಇದರ ತನಿಖೆ ಜವಾಬ್ದಾರಿಯನ್ನು ಸರ್ಕಾರ ವಹಿಸಿದೆ. ಸಿಬಿಐ ಮಾದರಿಯಲ್ಲಿ ಸಿಐಡಿ ಕೂಡ ತನಿಖೆ ಮತ್ತು ಕಾರ್ಯತಂತ್ರ ಅಳವಡಿಸಿಕೊಂಡು ಕೆಲಸ ಮಾಡಲಿದೆ ಎಂದು ಸಲೀಂ ಮಾಹಿತಿ ನೀಡಿದ್ದಾರೆ. ಸೈಬರ್ ಕ್ರೖೆಂನಲ್ಲಿ 1 ಕೋಟಿ ರೂ.ಗೂ ಅಧಿಕ ವಂಚನೆ ಆಗಿದ್ದರೆ ಅಂತಹ ಪ್ರಕರಣಗಳನ್ನು ಸಿಐಡಿ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗುತ್ತದೆ. ಉಳಿದಂತೆ ಸೈಬರ್ ಕ್ರೖೆಂ ತಡೆಗಟ್ಟುವ ಕುರಿತು ಪೊಲೀಸರಿಗೆ ಮತ್ತು ಇನ್ನಿತರ ಸಂಘ, ಸಂಸ್ಥೆಗಳಿಗೆ ತರಬೇತಿ ಮತ್ತು ಅರಿವು ಮೂಡಿಸಲಾಗುತ್ತದೆ.

ಸಿಬಿಐ ಮಾದರಿಯಲ್ಲಿ ಸಿಐಡಿ ಕಾರ್ಯ ನಿರ್ವಹಿಸಲಿದೆ. ಗಂಭೀರ ಪ್ರಕರಣಗಳ ತನಿಖೆ ಮಾದರಿ, ಸಾಕ್ಷ್ಯ ಸಂಗ್ರಹ, ಆರೋಪಪಟ್ಟಿ ಸಲ್ಲಿಕೆ ಪ್ರತಿಯೊಂದು ಹಂತದಲ್ಲಿ ಬದಲಾವಣೆ ತರಲಾಗಿದೆ. ಪ್ರಾಥಮಿಕ ಚಾರ್ಜ್​ಶೀಟ್ ಸಲ್ಲಿಕೆ ಪದ್ಧತಿ ಇರುವುದಿಲ್ಲ. ನೇರವಾಗಿ ಅಂತಿಮ ಆರೋಪಪಟ್ಟಿಯೇ ಸಲ್ಲಿಸಬೇಕು. | ಡಾ.ಎಂ.ಎ.ಸಲೀಂ, ಸಿಐಡಿ ಡಿಜಿಪಿ

ಬಾಕಿ 854 ಕೇಸ್ ಹಂಚಿಕೆ: 2018ರಿಂದ ಈವರೆಗೂ 854 ಕೇಸ್​ಗಳು ಬಾಕಿ ಇವೆ. ಪ್ರತಿಯೊಬ್ಬ ತನಿಖಾಧಿಕಾರಿಗೆ ತಲಾ 4 ಪ್ರಕರಣ ವಹಿಸಿದ್ದು, 90 ದಿನಗಳಲ್ಲಿ ಅಂತಿಮ ಆರೋಪಪಟ್ಟಿ ಸಲ್ಲಿಸಬೇಕು. ಈ ಮೊದಲು ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿ ಸುಮ್ಮನಾಗುತ್ತಿದ್ದರು. ತನಿಖೆ ಮುಗಿಯದಿದ್ದರೆ ಮೇಲಧಿಕಾರಿ ಗಮನಕ್ಕೆ ತಂದು ಹೆಚ್ಚುವರಿ 1 ತಿಂಗಳು ಅವಕಾಶ ಪಡೆಯಬಹುದು. ಆಗಲೂ ಸಲ್ಲಿಸದಿದ್ದರೆ ಎಡಿಜಿಪಿಗೆ ಸಮಜಾಯಿಷಿ ಕೊಟ್ಟರೆ ಮತ್ತೆ 2 ತಿಂಗಳು ಸಮಯ ಸಿಗಲಿದೆ. ಈ ಸಮಯದಲ್ಲೂ ತನಿಖೆ ಮುಗಿಸದಿದ್ದರೆ ನನ್ನ ಗಮನಕ್ಕೆ ತರಬೇಕು. ತನಿಖಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದರೇ ಶಿಸ್ತುಕ್ರಮ ಆಗಲಿದೆ. ಅಗತ್ಯ ಇದ್ದರೆ 6 ತಿಂಗಳು ಅವಕಾಶ ನೀಡಲಾಗುತ್ತದೆ. ಈಗಾಗಲೇ 74 ಕೇಸಿನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ವರ್ಷದ ಅಂತ್ಯದ ವೇಳೆಗೆ ಈ ಪ್ರಕರಣಗಳನ್ನು 500ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಸಲೀಂ ಹೇಳಿದ್ದಾರೆ.

ಮೇಲ್ವಿಚಾರಣೆಗೆ ಇನ್​ಸ್ಪೆಕ್ಟರ್: ಆರೋಪಪಟ್ಟಿ ಸಲ್ಲಿಸಿದ ಮೇಲೆ ಕೋರ್ಟ್​ನಲ್ಲಿ ವಿಚಾರಣೆಯ ಮೇಲ್ವಿಚಾರಣೆಗೆ ಪ್ರತಿಯೊಂದು ಘಟಕಕ್ಕೆ ಒಬ್ಬ ಇನ್​ಸ್ಪೆಕ್ಟರ್ ನೇಮಿಸಲಾಗಿದೆ. ಕೋರ್ಟ್​ನಲ್ಲಿ ಎಷ್ಟು ಕೇಸ್​ಗಳಿವೆ, ವಿಚಾರಣೆ ಯಾವ ಹಂತದಲ್ಲಿದೆ, ಸಾಕ್ಷಿದಾರರನ್ನು ಹಾಜರುಪಡಿಸುವುದು ಮತ್ತು ಕೋರ್ಟ್​ಗೆ ಅಗತ್ಯ ದಾಖಲೆ ಒದಗಿಸುವ ಕೆಲಸ ಇವರು ಮಾಡಲಿದ್ದಾರೆ.

ಹೇಗಿರುತ್ತೆ ಸಿಐಯು ಕೆಲಸ?

  • ಸೊಸೈಟಿ, ಚಿಟ್​ಫಂಡ್ ಮೋಸ, ಆಮಿಷವೊಡ್ಡಿ ಹೂಡಿಕೆದಾರರಿಗೆ ವಂಚನೆ ಪ್ರಕರಣಗಳ ಮೇಲೆ ನಿಗಾ.
  • ಸ್ಥಳೀಯ ಠಾಣೆಗಳಲ್ಲಿ ಎಫ್​ಐಆರ್ ದಾಖಲಾದ ಕೂಡಲೇ ಹಣಕಾಸಿನ ದಾಖಲೆ ಪತ್ರ ಸಂಗ್ರಹಿಸಲಿದೆ.
  • ಹೂಡಿಕೆದಾರರ ಹಣ ಬೇರೆಡೆ ವರ್ಗಾವಣೆ ಆಗದಂತೆ ತಡೆ. ಸ್ಥಿರಾಸ್ತಿ, ಚರಾಸ್ತಿ ಪತ್ತೆ ಮಾಡಿ ಜಪ್ತಿ.
  • ಲೆಕ್ಕಪರಿಶೋಧಕರಿಂದ ಆಡಿಟ್ ಮಾಡಿಸಿ ಅವ್ಯವಹಾರ ಪತ್ತೆ ಮಾಡಿ ನೊಂದವರಿಗೆ ನ್ಯಾಯ ಒಗಿಸಲು ಕ್ರಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net