

ಬೆಂಗಳೂರು: ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ ಮುಂತಾದ ಬೇಡಿಕೆಯುಳ್ಳ ಕೋರ್ಸ್‌ಗಳ ಸೀಟ್‌ಗಳನ್ನು ಬ್ಲಾಕ್ ಮಾಡುವ ವ್ಯವಸ್ಥಿತ ಜಾಲವೇ ಇರುವಂತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಶಂಕೆ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಹು ನೋಂದಣಿ, ಸೀಟ್ ಆಯ್ಕೆ ಮಾಡಿಕೊಂಡ ನಂತರವೂ ವರದಿ ಮಾಡಿಕೊಳ್ಳದ 2,300 ವಿದ್ಯಾರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುತಿಸಿದೆ.
ದಾಖಲಾಗದ, ವರದಿ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ ಶೇಕಡ 50ರಷ್ಟು ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು ಗೊತ್ತಿಲ್ಲ. ಅನಾರೋಗ್ಯ, ಶುಲ್ಕದ ಹೊರೆ ಇನ್ನಿತರ ಕಾರಣಗಳನ್ನು ನೀಡಿದ್ದಾರೆ.
ಮೊದಲ, ಎರಡನೇ ಸುತ್ತಿನಲ್ಲಿ ಆಯ್ಕೆಯಾಗಬಲ್ಲ ಶ್ರೇಯಾಂಕವುಳ್ಳ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳದಿರುವುದು, ನಂತರ ಆಯ್ಕೆ ಮಾಡಿಕೊಂಡು ದಾಖಲಾಗದಿರುವುದು ಗಮನಿಸಿದರೆ ಸೀಟು ಬ್ಲಾಕಿಂಗ್ ದಂಧೆ ಅನುಮಾನ ಉಂಟಾಗಿದೆ.
ವ್ಯವಸ್ಥಿತ ಜಾಲವೊಂದು ಈ ದಂಧೆ ಹಿಂದಿರುವಂತಿದೆ. ಇದನ್ನು ಬೇಧಿಸುವ ಉದ್ದೇಶದಿಂದ ವರದಿ ಮಾಡಿಕೊಳ್ಳದ ವಿದ್ಯಾರ್ಥಿಗಳು ಬಹು ನೋಂದಣಿ ಬಳಸಿದ ಐಪಿ ಅಡ್ರೆಸ್ ಆಧರಿಸಿ ಕ್ರಿಮಿನಲ್ ದಾವೆ ಹೂಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸುವೆ ಎಂದರು.
ಒಂದು ಐಪಿ ಅಡ್ರೆಸ್ ಮೇಲೆ ಗರಿಷ್ಠ 10 ಆಯ್ಕೆ ನೋಂದಣಿಗೆ ಅವಕಾಶವಿದೆ. ಪ್ರತಿಷ್ಠಿತ ಕಾಲೇಜುಗಳ 20 ರಿಂದ 90ರವರೆಗೆ ಸೀಟುಗಳು ಈ ಪಟ್ಟಿಯಲ್ಲಿವೆ. ಬಹು ಬೇಡಿಕೆಯ ಕೋರ್ಸ್‌ಗಳನ್ನು ಪಡೆದೂ ವರದಿ ಮಾಡಿಕೊಳ್ಳದಿರುವುದು ಸಂಶಯಕ್ಕೆ ಮೂಲ ಕಾರಣವೆಂದು ಹೇಳಿದರು.
ಅವಸರದ ಕ್ರಮವಾದೀತು
ಸೀಟ್ ಬ್ಲಾಕಿಂಗ್‌ನಲ್ಲಿ ಯಾವುದೇ ಕಾಲೇಜು, ಶಿಕ್ಷಣ ಸಂಸ್ಥೆಗಳ ಪಾತ್ರವಿದೆ ಎಂದು ಶಂಕಿಸುವುದು, ಈಗಲೇ ಏನನ್ನಾದರೂ ಹೇಳುವುದು ಅವಸರದ ಕ್ರಮವಾದೀತು. ಐಪಿ ಅಡ್ರೆಸ್ ಆಧರಿಸಿ, ಕ್ರಿಮಿನಲ್ ದಾವೆಯಡಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದರೆ ಜಾಲದ ಆಳ-ಅಗಲ ತಿಳಿಯಲಿದೆ ಎಂದರು.
ಕಳೆದ ವರ್ಷವೂ ಇದೇ ರೀತಿ ಕೃತ್ಯ ನಡೆದಿರುವುದು ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಕೆಇಎ ಅಧಿಕಾರಿಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೀಟ್ ಬ್ಲಾಕಿಂಗ್ ನಿಂದ ಬೇರೆ ಅರ್ಹ, ಬಡ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎಂದು ಡಾ.ಎಂ.ಸಿ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಬಿಎಂಎಸ್ ಕಾಲೇಜು-92, ಆಕಾಶ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ- 82, ನ್ಯೂ ಹೊರಿಜೋನ್ ಕಾಲೇಜು- 52, ವಿವೇಕಾನಂದ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ- 45, ದಯಾನಂದ ಸಾಗರ ಕಾಲೇಜ್ ಆ್ ಇಂಜಿನಿಯರಿಂಗ್- 34, ಸರ್ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ-32 ಮತ್ತು ಎಂವಿಜೆ ಕಾಲೇಜ್ ಆ್ ಇಂಜಿನಿಯರಿಂಗ್- 31 ಸೀಟುಗಳಿಗೆ ವಿದ್ಯಾರ್ಥಿಗಳು ದಾಖಲು/ವರದಿ ಮಾಡಿಕೊಂಡಿಲ್ಲ ಎಂಬ ಶಂಕಿತ ಅಂಕಿ-ಅಂಶಗಳನ್ನು
ವಿವರಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2024ರ ಬಳಿಕ ಸೀಟುಗಳ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಮಾಪ್ ಅಪ್ ಸುತ್ತಿನ ನಂತರ ಉಳಿದ 13 ಸಾವಿರ ಸೀಟುಗಳನ್ನು ಒಪ್ಪಂದದ ಪ್ರಕಾರ ಆಯಾ ಖಾಸಗಿ, ಸರ್ಕಾರಿ ಕಾಲೇಜುಗಳಿಗೆ ಹಿಂತಿರುಗಿಸಲಾಗಿದೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.