ಕ್ರಿಮಿನಲ್ ಕೇಸ್ ದಾಖಲು:ಸುರೇಶ್ ಎಚ್ಚರಿಕೆ

lokayukta
ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುರೇಶ್ ಮಾತನಾಡಿದರು. ಅವಿನಾಶ್, ಸುರೇಂದ್ರ, ಪ್ರಕಾಶ್ ಇದ್ದರು.
Published on

ಶಿವಮೊಗ್ಗ: ಜನವಸತಿ ಪ್ರದೇಶದ ಸನಿಹದಲ್ಲೇ ಕೋಳಿ ಫಾರ್ಮ್. ಅನುಮತಿ ಪಡೆದಿದ್ದೇ ಒಂದು ಜಾಗ, ಫಾರ್ಮ್ ನಿರ್ಮಿಸಿದ್ದು ಮತ್ತೊಂದು ಕಡೆ. ತಪ್ಪೆಸಗಿದವರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದರೆ ಪಿಡಿಒ ನಿರ್ಲಕ್ಷೃ ತೋರಿದ್ದಾರೆ. ಇದೇ ಪರಿಪಾಠ ಮುಂದುವರಿದರೆ ತಪ್ಪೆಸಗಿದ ಅಧಿಕಾರಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ. ಹೀಗೆಂದು ಎಚ್ಚರಿಕೆ ನೀಡಿದ್ದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುರೇಶ್.

ಶಿವಮೊಗ್ಗ ತಾಲೂಕಿನ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಲೋಪಗಳನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟರು. ಲೋಕಾಯುಕ್ತದಿಂದ ನೀಡಲಾಗುವ ಸೂಚನೆಗಳನ್ನೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಇಂದು ಗ್ರಾಪಂಗಳ ಅವ್ಯವಸ್ಥೆ, ಆಡಳಿತ ಕುಸಿತಕ್ಕೆ ಸಂಬಂಧಿಸಿ ಹೆಚ್ಚು ದೂರುಗಳು ಬರುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಡಿಒಗಳು ಅನವಶ್ಯಕವಾಗಿ ಜನರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ತ್ವರಿತವಾಗಿ ಕೆಲಸ ಮಾಡಿಕೊಡುತ್ತಿಲ್ಲ. ಜನರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ. ಇಂತಹ ಮನಸ್ಥಿತಿ ದೂರಾಗಬೇಕು. ಕಚೇರಿಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ತುರ್ತಾಗಿ ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಸೂಚಿಸಿದರು.
ಯಾರಾದರೂ ದಾಖಲೆಗಳನ್ನು ಕೇಳಿದರೆ ಸರಿಯಾಗಿ ಸ್ಪಂದಿಸಿ. ನೀಡಬಹುದಾದ ಹಾಗೂ ಲಭ್ಯವಿರುವ ದಾಖಲೆಗಳನ್ನು ತ್ವರಿತವಾಗಿ ನೀಡಿ. ಜನರ ಆಕ್ರೋಶಕ್ಕೆ ಗುರಿಯಾಗದಿರಿ. ಕೆಲ ಸಿಬ್ಬಂದಿ ಮೇಲಧಿಕಾರಿಗಳ ಆದೇಶವನ್ನೂ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪರೋಕ್ಷವಾಗಿ ಎಚ್ಚರಿಸಿದರು.
ತಾಪಂ ಇಒ ಅವಿನಾಶ್, ಲೋಕಾಯುಕ್ತ ಅಧಿಕಾರಿಗಳಾದ ಪ್ರಕಾಶ್, ವೀರಬಸಪ್ಪ ಕುಸ್ಲಾಪುರ, ಸುರೇಂದ್ರ, ಜಯಂತ್, ಗಂಗಾಧರ್ ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net