

ಕೋಲಾರ: ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿಯಾಗುತ್ತಿದೆ, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸೇವನೆ ಜಾಸ್ತಿಯಾಗುತ್ತಿದೆ, ಈ ಬಗ್ಗೆ ನಮ್ಮ ಬಳಿ ಮಾಹಿತಿಯಿದ್ದು ಅಧಿಕಾರಿಗಳಿಗೆ ಹೇಳಲಾಗಿದ್ದ ವಿಶೇಷ ತಂಡವನ್ನು ರಚನೆ ಮಾಡಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಂಡಿದ್ದಾರೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ, ನೀತಿಯಿಂದ 136 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭೀಕ್ಷವಾಗಿ ನಡೆಯುತ್ತಿದೆ, ಅಽಕಾರದಲ್ಲಿ ಇದ್ದಾಗ ಜನಪರ ಕೆಲಸ ಮಾಡಿದರೆ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.
ಮಂತ್ರಿಸ್ಥಾನ ಕೇಳಿಪಡೆದುಕೊಳ್ಳಬಾರದು, ನನಗೂ ಪ್ರೈಮಿನಿಸ್ಟಾರ್ ಆಗಬೇಕು ಎಂಬ ಆಸೆ ಇದೆ, ಅದಕ್ಕೂ ಒಂದು ಮಿತಿ ಇರುತ್ತದೆ. ಶಾಸಕರಾದವರು ಒಳ್ಳೆಯ ಕೆಲಸ ಮಾಡಬೇಕು, ಶಿಕ್ಷಣ, ಆರೋಗ್ಯ, ನಿರುದ್ಯೋಗಳಿಗಳಿಗೆ ಕೆಲಸ ದೊರಕಿಸುವುದು, ರೈತರ ಅಭಿವೃದ್ಧಿಗೆ ಶಾಸಕರು ಒತ್ತು ನೀಡಬೇಕು, ತಲೆಕೆಟ್ಟಿರುವ ಕೆಲ ಹುಚ್ಚು ಹಿಡಿದಂತೆ ಮಾತನಾಡುತ್ತಿದ್ದಾರೆ ಅದಕ್ಕೆಲ್ಲ ಯಾರು ಕಿವಿಗೋಡಬಾರದು. ಶಾಸಕರು ಸ್ವ ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ, ಅದನ್ನು ಎಲ್ಲಾ ಶಾಸಕರು ಪಾಲನೆ ಮಾಡಲಿ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಅಭ್ಯರ್ಥಿ ಯಾರೆಂದು ಇನ್ನು ತೀರ್ಮಾನವಾಗಿಲ್ಲ, ಜಿಲ್ಲೆಯಲ್ಲಿ ಡಿಸಿಸಿ ಅಧ್ಯಕ್ಷರು, ಶಾಸಕರು, ಹಿರಿಯರಾದ ರಮೇಶ್ ಕುಮಾರ್, ನಸ್ಸೀರ್ ಅಹಮದ್ ಇದ್ದಾರೆ, ವರಿಷ್ಠರೊಂದಿಗೆ ಚರ್ಚಿಸಿ ಯಾರು ಅಭ್ಯರ್ಥಿಯಾಗಬೇಕು ಎಂದು ತೀರ್ಮಾನಿಸಲಿದ್ದಾರೆ, ಮಲ್ಲಿಖಾರ್ಜುನ ಖರ್ಗೆಯವರು ಬಂದು ಸ್ಪರ್ಧಿಸುವ ಬಗ್ಗೆ ಮಾಹಿತಿಯಿಲ್ಲ ಎಂದು ತಿಳಿಸಿದರು.
ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳನ್ನು, ಸರ್ಕಾರಿ ಅಧಿಕಾರಿಗಳ ವಿರುದ್ಧ ಮಾತನಾಡುವುದು ಸರಿಯಲ್ಲ, ಎಸ್ಪಿಯವರ ವಿರುದ್ಧ ದೂರು ನೀಡಿದ್ದಾರೆ ತನಿಖೆಯಲ್ಲಿ ಆರೋಪ ಸಾಭೀತು ಆದರೆ ಕ್ರಮವಾಗಲಿ, ಅದು ಬಿಟ್ಟು ಅಧಿಕಾರಿಗಳ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕತ್ತಿ ಹಿಡಿದು ಪ್ರದರ್ಶನ ಮಾಡುವುದು ತಪ್ಪು, ಈದ್ ಮೀಲಾದ್ ಸೇರಿದಂತೆ ಯಾವುದೇ ಹಬ್ಬ ಆಚರಣೆ ಶಾಂತಿಯುತವಾಗಿ ನಡೆಯಬೇಕು. ನಗರಸಭೆ, ಜಿಲ್ಲಾಡಳಿತದ ಅನುಮತಿಯಿಲ್ಲದೆ ಕಡ್ಗ ಹಳವಡಿಸುವ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿದಂತಾಗುತ್ತದೆ. ಇಂತಹದ್ದು ಮರುಕಳುಹಿಸಬಾರದು ಎಂದರು.
ಸನಾತನ ಧರ್ಮ ಎಂದರೆ ದೇವರಿಗೆ ನಮಸ್ಕಾರ ಮಾಡುತ್ತೇವೆ, ಅಲ್ಪಸಂಖ್ಯಾತರು ಮಸೀದಿಗೆ ಹೋಗಿ ನಮಸ್ಕಾರ ಮಾಡುತ್ತಾರೆ, ನನ್ನ ಧರ್ಮವನ್ನು ಪಾಲನೆ ಮಾಡುತ್ತೇನೆ, ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಪಾಲನೆ ಮಾಡುವುದು ಬೇಡ ಅಂತ ಹೇಳಿರುವುದು ಸರಿಯಲ್ಲ, ಇಷ್ಟ ಇಲ್ಲದಿದ್ದರೆ ಸಮುದ್ರಕ್ಕೆ ಹೋಗಿ ಮುಳುಗಲಿ, ಪ್ರಕಾಶ್ ರಾಜ್ ಈ ಬಗ್ಗೆ ಟೀಕೆ ಮಾಡಿರುವುದು ತಪ್ಪು, ನಿಮ್ಹಾನ್ಸ್ ಆಸ್ಪತ್ರೆಯಿಂದ ಹೊರ ಬಂದು ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.