ರೇಪ್ ನಡೆದ 40 ವರ್ಷದ ಬಳಿಕ ಅಪರಾಧ ಸಾಬೀತು!

ವಿಜಯವಾಣಿ (8)
Published on

ನವದೆಹಲಿ: ಅತ್ಯಾಚಾರ ಪ್ರಕರಣ ನಡೆದು 40 ವರ್ಷಗಳ ಬಳಿಕ ತಪ್ಪನ್ನು ಸಾಬೀತುಪಡಿಸಿದ ಸುಪ್ರೀಂಕೋರ್ಟ್, ಅಪರಾಧಿಗೆ ಶಿಕ್ಷೆ ದೃಢ ಪಡಿಸಿದೆ. ಇತರ ಪುರಾವೆಗಳು ಪ್ರಕರಣವನ್ನು ಸಾಕ್ಷೀಕರಿಸುತ್ತಿದ್ದರೆ, ಖಾಸಗಿ ಅಂಗದ ಮೇಲೆ ಗಾಯಗಳಾಗಿರದಿದ್ದರೂ ಅಪರಾಧವನ್ನು ಸಾಬೀತುಪಡಿಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಸಂದೀಪ್ ಮೆಹ್ತ, ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಖಾಸಗಿ ಅಂಗದ ಮೇಲೆ ಗಾಯಗಳಾಗಿಲ್ಲ, ಸಂತ್ರಸ್ತೆ ಹಾಗೂ ಆಕೆಯ ತಾಯಿ ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿ ವಾದ ಮಂಡಿಸಿದ್ದರೂ ಪೀಠ ಅದನ್ನು ನಿರಾಕರಿಸಿ, ತಪ್ಪನ್ನು ಸಾಬೀತುಪಡಿಸಿದೆ. ಪ್ರತಿ ಅತ್ಯಾಚಾರ ಪ್ರಕರಣದಲ್ಲೂ ಸಂತ್ರಸ್ತೆಯ ಖಾಸಗಿ ಅಂಗದ ಮೇಲೆ ಗಾಯ ಆಗಿರಲೇಬೇಕಂತೇನಿಲ್ಲ. ಇದು ಆಯಾ ಪ್ರಕರಣದ ಸತ್ಯ-ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ.

ಪ್ರಾಸಿಕ್ಯೂಷನ್ ಸಲ್ಲಿಸುವ ಸಾಕ್ಷ್ಯವು ಗಾಯದ ಸಾಕ್ಷ್ಯದಷ್ಟೇ ಮೌಲ್ಯ ಹೊಂದಿರುತ್ತದೆ. ಏಕೈಕ ಸಾಕ್ಷ್ಯದ ಆಧಾರದ ಮೇಲೂ ಶಿಕ್ಷೆ ವಿಧಿಸಬಹುದು ಎಂಬುದು ಕ್ರಿಮಿನಲ್ ನ್ಯಾಯಶಾಸ್ತ್ರದ ಸ್ಥಿರತತ್ವ ಎಂದು ಪೀಠ ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿನಿಯೊಬ್ಬಳು 1984ರ ಮಾ.19ರಂದು ಟ್ಯೂಷನ್​ಗೆ ತೆರಳಿದ್ದಾಗ, ಶಿಕ್ಷಕ ಇತರ ಇಬ್ಬರು ವಿದ್ಯಾರ್ಥಿನಿಯರನ್ನು ಬೇರೆ ಕೆಲಸದ ಮೇಲೆ ಹೊರಕ್ಕೆ ಕಳಿಸಿ, ಈಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ಸಂಬಂಧ ವಿಚಾರಣಾ ನ್ಯಾಯಾಲಯ 1986ರಲ್ಲೇ ಆತನನ್ನು ಅಪರಾಧಿ ಎಂದು ಘೋಷಿಸಿತ್ತು. ಈ ತೀರ್ಪನ್ನು ಎತ್ತಿ ಹಿಡಿಯಲು ಹೈಕೋರ್ಟ್ 15 ವರ್ಷ ತೆಗೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net