ಕೋಲಾರದಲ್ಲಿ ಮರ್ಯಾದ ಹತ್ಯೆ | ಮಗಳ ಕತ್ತು ಹಿಸುಕಿದ ತಂದೆ; ಪ್ರೇಯಸಿ ಸಾವಿನ ಸುದ್ದಿ ಕೇಳಿ ರೈಲಿಗೆ ತಲೆ ಕೊಟ್ಟ ಪ್ರಿಯಕರ

Love
Published on

ಕೋಲಾರ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಮನನೊಂದ ಪ್ರಿಯಕರ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದಲ್ಲಿ ಮರ್ಯಾದ ಹತ್ಯೆ ನಡೆಯುತ್ತಿದ್ದಂತೆ, ಮುಂಜಾಗ್ರತೆಯ ದೃಷ್ಟಿಯಿಂದ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ.

ಪದವಿ ವ್ಯಾಸಂಗ ಮಾಡುತ್ತಿದ್ದ ಕೀರ್ತಿ(20) ತಂದೆಯಿಂದಲೇ ಕೊಲೆಯಾದರೆ, ತಮಟೆ ಕಲಾವಿದನಾಗಿದ್ದ ಗಂಗಾಧರ್​(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರಿಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಸಂಬಂಧ ಗಂಗಾಧರ್​ ತಮ್ಮ ಪ್ರೀತಿಯ ವಿಚಾರವನ್ನು ಕೀರ್ತಿಯ ತಂದೆ ಕೃಷ್ಣಮೂರ್ತಿ ಬಳಿ ಬಂದು ಹೇಳಿದ್ದಾನೆ. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿದೆ. ಹೀಗಾಗಿ ಮಗಳ ಪ್ರೀತಿಯನ್ನು ವಿರೋಧಿಸಿದ್ದರು.

ಆದರೆ ಮನೆಯವರು ಮಾತು ಕೇಳದೆ, ಇವರಿಬ್ಬರು ಪ್ರೀತಿ ಮುಂದುವರೆದಿದೆ. ಈ ಸಂಬಂಧ ಮಂಗಳವಾರ ಬೆಳಗ್ಗೆ ಮತ್ತೆ ಕೀರ್ತಿ ಮತ್ತು ತಂದೆ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಕೋಪಗೊಂಡ ಕೃಷ್ಣಮೂರ್ತಿ ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ತನ್ನ ಪ್ರೇಯಸಿ ಕೊಲೆಯಾಗಿರುವುದು ಗೊತ್ತಾಗುತ್ತಿದ್ದಂತೆ ಮನನೊಂದ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಕಾಮಸಮುದ್ರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಕೃಷ್ಣಮೂರ್ತಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net