ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ಫಲಿಸಲಿಲ್ಲ ಜೀವ ಉಳಿಸಿಕೊಳ್ಳುವ ಪ್ರಯತ್ನ

CA Cricketer Mallesh
Published on

ಉಡುಪಿ: ದೇಶ, ರಾಜ್ಯ ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲೂ ಕಳೆದ ಕೆಲವು ತಿಂಗಳುಗಳಿಂದ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣ ಮೇಲಿಂದ ಮೇಲೆ ನಡೆಯುತ್ತಿದ್ದು, ಇಂದು ಕ್ರಿಕೆಟಿಗರೊಬ್ಬರು ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

ಉಡುಪಿಯ ಉದ್ಯಾವರದ ಪಿತ್ರೋಡಿಯ ಮಲ್ಲೇಶ್​ (40) ಸಾವಿಗೀಡಾದ ವ್ಯಕ್ತಿ. ಕ್ರಿಕೆಟಿಗರೂ ಆಗಿರುವ ಇವರು ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್​. ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಉಡುಪಿಯ ಬನ್ನಂಜೆಯಲ್ಲಿ ಸಿಎ ಆಫೀಸ್ ಹೊಂದಿದ್ದ ಇವರು, ಚಾರ್ಟರ್ಡ್​ ಅಕೌಂಟೆಂಟ್​ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯಲ್ಲೂ ಇದ್ದರು. ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ, ವಿಎಸ್​ಸಿ ಬ್ಲಡ್ ಫಾರ್ ಲೈಫ್ ರಕ್ತದಾನ ಸಂಘದ ಸದಸ್ಯರೂ ಆಗಿದ್ದ ಇವರು ರಕ್ತದಾನ ಮಾಡುವ ಮೂಲಕ ಹಲವರನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವೆಂಕಟರಮಣ ಕ್ರಿಕೆಟರ್ಸ್ ನೇತೃತ್ವದ ತಂಡದಲ್ಲಿ ಪ್ರಮುಖ ಆಟಗಾರರಾಗಿ ಜಿಲ್ಲೆ ಹಾಗೂ ರಾಜ್ಯ-ರಾಷ್ಟ್ರಮಟ್ಟದ ಹಲವು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗಿಯಾಗಿ, ಪ್ರಶಸ್ತಿ ಗಳಿಸಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳು, ತಂದೆ-ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net