

ಬೆಂಗಳೂರು: ಅಂಧರ ವಿಶ್ವಕಪ್ ಗೆಲುವಿನಲ್ಲಿ ಭಾಗಿಯಾದ ಕರ್ನಾಟಕದ 6 ಆಟಗಾರರಿಗೆ ನಗದು ಪುರಸ್ಕಾರ ಘೋಷಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಆಟಗಾರರನ್ನು ರಾಜಭವನಕ್ಕೆ ಆಹ್ವಾನಿಸಿ ಸತ್ಕರಿಸಿದರು.
ಕ್ರಿಕೆಟ್ ಪಂದ್ಯಾವಳಿಗಳಲ್ಲಿ (ಕ್ರಿಕೆಟ್ ಫಾರ್ ಬ್ಲೈಂಡ್ ) ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡಲ್ಲಿರುವ ಕರ್ನಾಟಕದ ಮೂವರು ಆಟಗಾರರು ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಮೂವರು ಆಟಗಾರರನ್ನು ರಾಜ್ಯಪಾಲರು ಅಭಿನಂದಿಸಿದರು.
ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ ರಾಜ್ಯಪಾಲರು, ಈ ಗೌರವ ಹೆಚ್ಚಿಸುವಲ್ಲಿ ಕರ್ನಾಟಕದ ಆಟಗಾರರು ಪಾಲುದಾರರಾಗಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕರ್ನಾಟಕದ ವರ್ಷಾ.ಯು ಹಾಗೂ ತಂಡದ ಆಟಗಾರರಾದ ದೀಪಿಕಾ, ಗಂಗವ್ವ ಅವರಿಗೆ ತಲಾ 51 ಸಾವಿರ ರೂಪಾಯಿಗಳು ಮತ್ತು ಪುರುಷರ ತಂಡದ ಪ್ರಕಾಶ್ ಜೆ, ಸುನೀಲ್ ಕುಮಾರ್, ಬಸಪ್ಪ ಒಡ್ಡಗೋಲ್ ಆಟಗಾರರಿಗೆ ತಲಾ 41 ಸಾವಿರ ರೂಪಾಯಿಗಳ ನಗದು ಪ್ರೋತ್ಸಾಹವನ್ನು ನೀಡಲಾಗುವುದು ಎಂದು ರಾಜ್ಯಪಾಲರು ಘೋಷಿಸಿದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇಂಡಿಯಾದ ಆಜೀವ ಅಧ್ಯಕ್ಷ ಮಹಾಂತೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.