

ಸಾಮಾಜಿಕ ಮಾಧ್ಯಮಗಳು ನಕಾರಾತ್ಮಕ ಕಾರಣಗಳಿಗಾಗಿಯೇ ಹೆಚ್ಚು ಸುದ್ದಿಯಲ್ಲಿರುವುದು ವಾಡಿಕೆ. ಆದರೆ, ಅದು ನಾಣ್ಯದ ಒಂದು ಮುಖ ಮಾತ್ರ. ಏಕೆಂದರೆ, ಸಾಮಾಜಿಕ ಬದಲಾವಣೆಗೆ, ವಿವಿಧ ರಂಗಗಳ ವಿಕಾಸಕ್ಕೆ ಮತ್ತು ಜನರಲ್ಲಿ ಅರಿವು, ಜಾಗೃತಿ ಮೂಡಿಸುವುದಕ್ಕೆ ಸಾಮಾಜಿಕ ಮಾಧ್ಯಮಗಳ ವಿಷಯ ರಚನೆಕಾರರು (ಕಂಟೇಟ್ ಕ್ರಿಯೇಟರ್ಸ್) ಕೂಡ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಕಡಿಮೆ ಸಮಯದಲ್ಲಿ, ಸ್ವಾರಸ್ಯಕರ ಶೈಲಿಯಲ್ಲಿ ಇವರು ಮಂಡಿಸುವ ವಿಷಯ ಈಗ ಸಮಾಜದ ದನಿಯಾಗಿ ಬದಲಾಗುತ್ತಿದೆ. ಬದಲಾವಣೆಯ ಮಾಧ್ಯಮವೂ ಆಗುತ್ತಿದೆ. ಮಾಹಿತಿಯ ಪ್ರಪಂಚವನ್ನು ನವೀನ ರೂಪದಲ್ಲಿ ಪ್ರಸ್ತುತ ಪಡಿಸುತ್ತ, ಹೊಸ ಕಾಲದ ಅಗತ್ಯಗಳಿಗೆ ಸ್ಪಂದಿಸುತ್ತಿರುವ ರೀತಿ ಅನನ್ಯ. ಸೃಜನಶೀಲ ಮತ್ತು ತಾಜಾ ಚಿಂತನೆಗಳು ಪ್ರೇರಣೆ, ಸ್ಪೂರ್ತಿಯನ್ನು ಹುಟ್ಟುಹಾಕುವ ಜತೆಗೆ, ಏನಾದರೂ ವಿಶಿಷ್ಟವಾದದ್ದನ್ನು ಮಾಡುವ ತುಡಿತವನ್ನು ಜನರಲ್ಲಿ ಹೆಚ್ಚಿಸುತ್ತಿವೆ. ಒಂದು ಉತ್ತಮ ಸಂದೇಶ, ವಿಡಿಯೋ ಸಂಚಲನವನ್ನೇ ಸೃಷ್ಟಿಸುವಂಥ ನಿದರ್ಶನಗಳಿಗೆ ಸಾಕ್ಷಿಯಾಗಿದ್ದೇವೆ. ಈ ಮುಖೇನ ಸಾಮಾಜಿಕ ಮಾಧ್ಯಮಗಳ ಶಕ್ತಿ ಅನಾವರಣಗೊಂಡಿದೆ ಎಂಬುದು ಗಮನಾರ್ಹ. ಇಷ್ಟು ವರ್ಷಗಳವರೆಗೆ ವಿಷಯ ರಚನೆಕಾರರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು ಮತ್ತು ಬಂದ ವೀವ್ಸ್ (ವೀಕ್ಷಣೆ) ಮತ್ತು ಲೈಕ್ಗಳ ಆಧಾರದಲ್ಲಿ ಒಂದಿಷ್ಟು ಖ್ಯಾತಿಯನ್ನು ಪಡೆಯುತ್ತಿದ್ದರು ಎಂಬುದೇನೋ ನಿಜ. ಆದರೆ, ಕೇಂದ್ರ ಸರ್ಕಾರ ಸೃಜನಶೀಲ ಚಿಂತನೆಗಳನ್ನು ಉತ್ತೇಜಿಸಲು ಇದೇ ಮೊದಲ ಬಾರಿಗೆ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಅನ್ನು ಶುಕ್ರವಾರ ಪ್ರದಾನ ಮಾಡಿದೆ. ಇನ್ಸ್ಟಾಗ್ರಾಮ್ ಫೇಸ್ಬುಕ್, ಸಾಮಾಜಿಕ ಮಾಧ್ಯಮ ಎಕ್ಸ್ ಸೇರಿದಂತೆ ಇತರ ಡಿಜಿಟಲ್ ವಿಷಯ ರಚನೆಕಾರರಿಗೆ 20 ವಿಭಾಗಗಳಲ್ಲಿ, 23 ಜನರಿಗೆ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಸರ್ಕಾರ ಸಕಾರಾತ್ಮಕ ಚಿಂತನೆಗಳನ್ನು ಪ್ರೋತ್ಸಾಹಿಸುವ ಹೊಸ ಪರಂಪರೆಯನ್ನು ಹುಟ್ಟುಹಾಕಿರುವುದು ಸ್ವಾಗತಾರ್ಹ.
ಸಾಮಾಜಿಕ ಮಾಧ್ಯಮಗಳು ಸಕಾರಾತ್ಮವಾಗಿ ಬಳಕೆಯಾಗಲಿ
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಜಗತ್ತಿಗೆ ತಿಳಿಸೋಣ. ದೇಶವು ಈಗ ನಿಮ್ಮತ್ತ (ವಿಷಯ ರಚನೆಕಾರರು) ಆಶಾವಾದದಿಂದ ನೋಡುತ್ತಿದೆ. ನಾವು ಕೂಡ ಏನಾದರೂ ಅಸಾಧಾರಣವಾದದ್ದನ್ನು ಮಾಡಬೇಕು ಎಂದು ನಿಶ್ಚಯಿಸಲು ನಿಮ್ಮೆಲ್ಲರ ಕೊಡುಗೆ ತುಂಬ ಇದೆ’ ಎಂದರಲ್ಲದೆ, ಜನರಿಗೆ ಪ್ರೇರಣೆ ನೀಡುವ ವಿಷಯವನ್ನು ಹೆಚ್ಚೆಚ್ಚು ರಚಿಸಿ ಎಂದು ಕರೆ ನೀಡಿದರು. ಇಂಥ ವಿಷಯ ರಚನೆಕಾರರನ್ನು ಸರ್ಕಾರವೇ ಗುರುತಿಸಿರುವುದರಿಂದ, ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಸೃಜನಶೀಲ ಕಂಟೇಟ್ ಕ್ರಿಯೇಟರ್ಸ್ಗಳ ಸಂಖ್ಯೆ ಹೆಚ್ಚಲಿದೆ. ಕೇಂದ್ರದ ಮಾದರಿಯಲ್ಲಿ ಆಯಾ ರಾಜ್ಯ ಸರ್ಕಾರಗಳು ಕೂಡ ಇಂಥ ಉತ್ತೇಜಕ ನೀತಿಗಳನ್ನು ಕೈಗೊಳ್ಳುವುದು ಅಗತ್ಯ. ಮುಖ್ಯವಾಗಿ, ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ, ಹೊಸ ಚಿಂತನೆಗಳಿಗೆ ಕೊರತೆಯಿಲ್ಲ. ಅಲ್ಲೂ ಯುವಕರಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಿದರೆ, ಗ್ರಾಮೀಣ ಭಾರತದ ದನಿಯೂ ಗಟ್ಟಿಯಾಗುತ್ತದೆ. ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದ್ದು, ಸಕಾರಾತ್ಮಕ ಬಳಕೆ ಮೂಲಕ ಸಮಾಜದ ಕೊರತೆಗಳನ್ನು ನೀಗಿಸಬಹುದು ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗಬೇಕಿದೆ.