ನಂಜನಗೂಡು: ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ್ದಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಲು ನೆರವಾಗಿದ್ದಾರೆ ಎಂಬ ಆರೋಪದ ಮೇರೆಗೆ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳೂ ಸೇರಿದಂತೆ 5 ಜನರ ಮೇಲೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಉದಯಪುರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ನಾಗರಾಜರಾಮ್ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನನ್ನ ಸಹೋದರ ಚಂದ್ರಶೇಖರ್ ಅವರ ಹೆಸರಿನಲ್ಲಿ 3 ಎಕರೆ 16 ಗುಂಟೆ ಪಿತ್ರಾರ್ಜಿತ ಜಮೀನು ಇತ್ತು. ನನ್ನ ಸಹೋದರ ಉದ್ಯೋಗದ ನಿಮಿತ್ತ ಕೆನಡಾ ದೇಶದಲ್ಲಿ ತನ್ನ ಕುಟುಂಬದವರೊಡನೆ ಇದ್ದಾರೆ. ನಾನು 2023ರ ಫೆಬ್ರವರಿಯಲ್ಲಿ ನಮ್ಮ ಜಮೀನಿಗೆ ಕಂದಾಯ ಕಟ್ಟಲು ತಾಲೂಕು ಕಚೇರಿಗೆ ಹೋದಾಗ ನನ್ನ ಅಣ್ಣ ಚಂದ್ರಶೇಖರ್ ನಿಧರಾಗಿದ್ದರೆಂದು ಸುಳ್ಳು ಪ್ರಮಾಣ ಹಾಗೂ ನಾನು ಅವರ ಮಗ ಎಂಬ ಸುಳ್ಳು ದಾಖಲೆಗಳನ್ನು ನೀಡಿ ಗೀಕಳ್ಳಿ ನಿವಾಸಿಗಳಾದ ಕೃಷ್ಣೇಗೌಡ, ಶಿವಮಲ್ಲೇಗೌಡ ತಮ್ಮ ಹೆಸರಿಗೆ ಜಮೀನಿನ ಖಾತೆಗಳನ್ನು ಮಾಡಿಸಿಕೊಂಡಿರುವುದು ತಿಳಿಯಿತು. ಇವರಿಗೆ ಗೋಳೂರು ವೃತ್ತದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಿಗ ಮಂಜುನಾಥ್, ರಾಜಸ್ವ ನಿರೀಕ್ಷಕ ಪ್ರಕಾಶ್, ಶಿರಸ್ತೇದಾರ್ ಶ್ರೀನಾಥ್ ಅವರು ನನ್ನ ಅಣ್ಣನ ನಕಲಿ ಮರಣ ಪತ್ರ, ನಕಲಿ ವಂಶವೃಕ್ಷ ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ. ನಮ್ಮ ಆಸ್ತಿಯನ್ನು ಲಪಟಾಯಿಸಲು ಸಂಚು ನಡೆಸಿರುವ ಹಾಗೂ ಇವರಿಗೆ ನೆರವಾಗಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ನಾಗರಾಜರಾಮ್ ನೀಡಿದ ದೂರಿನನ್ವಯ ಕೃಷ್ಣೇಗೌಡ, ಶಿವಮಲ್ಲೇಗೌಡ ಹಾಗೂ ಕಂದಾಯ ಇಲಾಖೆಯ ನೌಕರ ಮಂಜುನಾಥ್, ರಾಜಸ್ವ ನಿರೀಕ್ಷಕ ಪ್ರಕಾಶ್, ಶಿರಸ್ತೇದಾರ್ ಶ್ರೀನಾಥ್ ಮೇಲೆ ಪೊಲೀಸರು ಪ್ರಕರಣ ದಾಖಸಿಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.