ಯುವಜನರಲ್ಲಿ ಸಂಸ್ಕೃತಿ ಅರಿವು ಮೂಡಿಸಿ

1-ANP-P3
ಆನಂದಪುರ ಮುರುಘಾ ಮಠದಲ್ಲಿ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವದ ಭಾವೈಕ್ಯ ಸಮ್ಮೇಳನದಲ್ಲಿ ಹಸೆ ಕಲಾವಿದೆ ಕಾನಲೆ ಲಕ್ಷ್ಮೀ ರಾಮಪ್ಪ ಅವರಿಗೆ ಕೆಳದಿ ರಾಣಿ ಚನ್ಮಮ್ಮ ಪ್ರಶಸ್ತಿ ನೀಡಲಾಯಿತು. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಡಾ. ಧನಂಜಯ ಸರ್ಜಿ, ಗೋಪಾಲಕೃಷ್ಣ ಬೇಳೂರು ಇತರರಿದ್ದರು.
Published on

ಆನಂದಪುರ: ಆಧುನಿಕ ಮಾಧ್ಯಮಗಳ ಅತಿಯಾದ ಬಳಕೆ ಮಕ್ಕಳು ಮತ್ತು ಯುವಜನರ ಸಮಯವನ್ನು ಹಾಳುಮಾಡುತ್ತಿದೆ. ಕಲೆ, ಸಂಸ್ಕೃತಿ ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶ್ರೀ ಮಠದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವ, ಭಾವೈಕ್ಯ ಸಮ್ಮೇಳನ, ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ವೈಜ್ಞಾನಿಕ ಉಪಕರಣ ಬಳಕೆಯಾಗುತ್ತಿದೆ. ಮಾನವನ ಶ್ರಮ ಕಡಿಮೆ ಮಾಡಿದೆ. ಬಿಡುವು ಸಾಕಷ್ಟು ಸಿಕ್ಕರೂ ಯುವಜನರು ನಾಡು-ನುಡಿ, ಕಲೆ-ಸಂಸ್ಕೃತಿ ಬಗ್ಗೆ ಗಂಭೀರವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪೂರ್ವಜರು ಶ್ರಮದ ದುಡಿಮೆ ನಡುವೆಯೂ ಹಾಡು, ಕೋಲಾಟ, ಹಸೆ ಚಿತ್ತಾರ, ರಂಗೋಲಿ, ರಂಗಕಲೆಗಳಲ್ಲಿ ತೊಡಗಿಕೊಂಡು ಅಮೂಲ್ಯ ಕೊಡುಗೆ ನೀಡಿದ್ದರು. ಹಸೆ ಚಿತ್ತಾರ ಕ್ಷೇತ್ರದಲ್ಲಿ ಕಾನಲೆ ಲಕ್ಷ್ಮೀ ರಾಮಪ್ಪ ಅವರಿಗೆ ರಾಜ್ಯ ಪ್ರಶಸ್ತಿ ಸಂದಿರುವುದು ಜಿಲ್ಲೆಗೆ ಹೆಮ್ಮೆ ಮೂಡಿಸಿದೆ ಎಂದರು.

ವಿವಿಧ ಹವ್ಯಾಸಗಳು ಮನುಷ್ಯನನ್ನು ಸಾರ್ಥಕ ಬದುಕಿನತ್ತ ಕೊಂಡೊಯ್ಯುತ್ತವೆ. ರಚನಾತ್ಮಕ ಹವ್ಯಾಸದಲ್ಲಿ ತೊಡಗಿದವರು ಸಮಾಜಮುಖಿ ಕಾರ್ಯ ನಡೆಸಬಲ್ಲರು. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ನಾಡಿನಲ್ಲಿ ಭಾವೈಕ್ಯತೆ ಮೂಡಿಸಿ ಸಮಾನತೆ ಬದುಕು ಕಟ್ಟಿದ್ದರು. ಇಂತಹ ಆದರ್ಶ ಈಗ ಮತ್ತೊಮ್ಮೆ ಕ್ರಾಂತಿಯಂತೆ ಜನರಲ್ಲಿ ಒಡಮೂಡಬೇಕು ಎಂದು ತಿಳಿಸಿದರು.

ಕಾಶಿ ಜಂಗಮವಾಡಿ ಮಠದ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉಪನ್ಯಾಸಕಿ ಡಾ. ಶುಭಾ ಮರವಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net