

ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಸ್ಥಳೀಯ ಸಂಸ್ಥೆಗಳು ಬಳಕೆ ಮಾಡಿಕೊಳ್ಳುವ ಮೂಲಕ ಬುದ್ಧಿವಂತಿಕೆಯಿಂದ ಸ್ಥಳೀಯಮಟ್ಟದಲ್ಲಿ ಆದಾಯ ಮೂಲ ಸೃಷ್ಟಿಸಿಕೊಳ್ಳಬೇಕು ಎಂದು 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹೇಳಿದರು.
ನಗರದ ನಗರಸಭೆ ಕಚೇರಿ ಸಭಾಗಂಣದಲ್ಲಿ 5ನೇ ಹಣಕಾಸು ಆಯೋಗದಿಂದ ಸೋಮವಾರ ಹಮ್ಮಿಕೊಂಡಿದ್ದ ನಗರಸಭೆ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಮುಖ. ಲಭ್ಯವಿರುವ ಅನುದಾನ ಸಮರ್ಪಕವಾಗಿ ಅಭಿವೃದ್ಧಿ ಕೆಲಸಗಳಿಗೆ ಸದ್ಬಳಸಿಕೊಳ್ಳಬೇಕು ಎಂದರು.
ಸರ್ಕಾರ ನೀಡಿದ ಅನುದಾವನ್ನು ಅಧಿಕಾರಿಗಳು ನಿಗದಿತ ಸಮಯದಲ್ಲಿ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅನುದಾನ ವಾಪಸ್ ಹೋಗುತ್ತದೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಗೆ ಅಧಿಕಾರ ದೊರಕಬೇಕು. ಇದು ಸಂವಿಧಾನದಡಿ ಕಲ್ಪಿಸಿರುವ ಅವಕಾಶ. ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಹೆಚ್ಚು ಜನ ಬರುತ್ತಿದ್ದಾರೆ, ಅದೇ ರೀತಿ ನಗರವು ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಇದರಿಂದ ಆದಾಯ ಹೆಚ್ಚಾಗುತ್ತದೆ, ಇಂತಹ ವಿಚಾರಗಳ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಗಮನ ಹರಿಸಬೇಕು ಎಂದರು.
ಸದಸ್ಯ ಎಸ್.ಆರ್.ಮುರಳೀಗೌಡ ಮಾತನಾಡಿ, ವರ್ಷದಿಂದ ವರ್ಷಕ್ಕೆ ನಗರದಲ್ಲಿ ಜನಸಂಖೆ್ಯ ಹೆಚ್ಚಾಗುತ್ತಿದೆ, ಸರ್ವೇ ನಂಬರ್ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಅವರಿಗೆ ಇ-ಆಸ್ತಿ ನೀಡಿದರೆ ಆದಾಯ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ನಗರಸಭೆ ಹಾಗೂ ಸರ್ಕಾರಿ ಆಸ್ತಿಗಳ ಮೇಲೆ ಕೆಲವರು ದಾವೆ ಹೂಡಿದ್ದಾರೆ, ನಗರಸಭೆ ಪರವಾಗಿ ದಾಖಲೆಗಳು ಇದ್ದರೂ ಆಸ್ತಿ ಉಳಿಸುವ ಗೋಜಿಗೆ ಅಽಕಾರಿಗಳು ಮುಂದಾಗುತ್ತಿಲ್ಲ ಎಂದು ಬೇಸರಿಸಿದರು.
ಸದಸ್ಯ ಅಂಬರೀಶ್ ಮಾತನಾಡಿ, ನಗರದಲ್ಲಿ ಬೀದಿದೀಪ ಅಳವಡಿಸುವ ಗುತ್ತಿಗೆಯನ್ನು ಸರ್ಕಾರ ನಗರಸಭೆಗೆ ನೀಡಿಲ್ಲ. ಈ ವಿಚಾರ ಗಮನಿಸುತ್ತಿದ್ದರೆ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲಾ, ಎಸ್.ಆರ್.ಪೊಂಡೇ, ಯೋಜನಾ ನಿರ್ದೇಶಕಿ ಅಂಬಿಕಾ ಇದ್ದರು.
ಕೋಟ್…
ಅಧಿಕಾರಿಗಳ ವಿರುದ್ಧ ಆರೋಪ ಮಾಡುವ ಉದ್ದೇಶವಿಲ್ಲ, ತಪ್ಪು ಆದಾಗ ಆರೋಪ ಮಾಡಬೇಕಾಗುತ್ತದೆ. ಗುತ್ತಿಗೆದಾರರು ಕಳಪೆ ಕೆಲಸ ಮಾಡುತ್ತಿದ್ದು, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
| ಪ್ರಸಾದ್‌ಬಾಬು, ನಗರಸಭೆ ಸದಸ್ಯ