

ಬೆಂಗಳೂರು: ಯುಗಾದಿ ಹೊಸ ವರ್ಷಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಹೊಸದೊಂದು ಲೋಕಕ್ಕೆ ಅಧಿಕೃತವಾಗಿ ಪ್ರವೇಶ ನೀಡಿದ್ದಾರೆ. ಅದುವೇ ಸಾಮಾಜಿಕ ಜಾಲತಾಣವೆಂಬ ಇಂದಿನ ಮಾಯಾ ಲೋಕ.
ತಮ್ಮ ಹೆಸರಿನಲ್ಲಿ ನಕಲಿ ಖಾತೆ ಇರುವುದನ್ನು ಕೆಲ ದಿನಗಳ ಹಿಂದೆ ಗಮನಿಸಿದ್ದ ರವಿಚಂದ್ರನ್, ತಾವೇ ಸಾಮಾಜಿಕ ಜಾಲತಾಣಕ್ಕೆ ಅಧಿಕೃತವಾಗಿ ಪ್ರವೇಶ ನೀಡುವ ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಣ್ಣ ವಿಡಿಯೋ ತುಣುಕಿನ ಮೂಲಕ ಜಾಲತಾಣ ಪ್ರವೇಶಾತಿಗೆ ದಿನಗಣನೆ ಆರಂಭಿಸಿದ್ದರು.
ಯುಗಾದಿ ಹೊಸ ಸಂವತ್ಸರದಂದೇ ರವಿಮಾಮ ಟ್ವಿಟ್ಟರ್ ಹಾಗೂ ಯೂಟ್ಯೂಬ್ನಲ್ಲಿ ಒನ್ ಅಂಡ್ ಒನ್ಲೀ ರವಿಚಂದ್ರನ್ (1n1ly Ravichandran) ಹೆಸರಿನಲ್ಲಿ ಪೇಜ್ ಕ್ರಿಯೇಟ್ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಖಾತೆ ಮೂಲಕ ಜನರಿಗೆ ಹೊಸ ಮಾಹಿತಿಯ ಜತೆಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಅದರಂತೆಯೇ ಮೊದಲ ವಿಡಿಯೋದಲ್ಲೇ ಧೂಮಪಾನ ಹಾಗೂ ಕರೊನಾ ಬಗ್ಗೆ ರವಿಚಂದ್ರನ್ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ಅಭಿಮಾನಿಗಳಿಗೆ ಒಂದು ಸಣ್ಣ ವಿಡಿಯೋವನ್ನು ಸಹ ಅರ್ಪಿಸಿದ್ದಾರೆ.
ಏನೇ ಇರಲಿ ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣದ ಅವಶ್ಯಕತೆ ಇದೆ. ಹೀಗಾಗಿ ಕೊನೆಗೂ ಜಾಲತಾಣಕ್ಕೆ ಎಂಟ್ರಿ ನೀಡಿರುವ ರವಿಮಾಮನಿಗೆ ಸ್ವಾಗತ ಕೋರೋಣ.