

ರಾಮನಗರ : ಜಿಲ್ಲೆಯ ರಾಜಕಾರಣ ಪ್ರತಿದಿನ ಸುದ್ದಿಯಲ್ಲಿದೆ. ಅದರಲ್ಲೂ ಕಳೆದ ಎರಡು ದಿನಗಳ ಹಿಂದೆ ಮೂವರು ಪ್ರಮುಖ ರಾಜಕಾರಣಿಗಳು ಚನ್ನಪಟ್ಟಣದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಚರ್ಚೆಗೆ ಕಾರಣವಾಗಿದೆ.
ಆದರೆ, ಇದೇ ವೇದಿಕೆಯನ್ನು ಬಳಸಿಕೊಂಡು ದಾಳ ಉರುಳಿಸಿರುವ ಸಂಸದ ಡಿ.ಕೆ.ಸುರೇಶ್, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡಿದ್ದಾರೆ.
ರಾಜ್ಯ ರಾಜಕಾರಣ ಮತ್ತು ಜಿಲ್ಲೆಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿ.ಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಯೋಗೇಶ್ವರ್ ಮತ್ತು ಸಂಸದ ಡಿ.ಕೆ. ಸುರೇಶ್ ಬದ್ಧ ವೈರಿಗಳು. ಒಬ್ಬರು ಮತ್ತೊಬ್ಬರ ಸೋಲಿಗೆ ಹಪಹಪಿಸುತ್ತಾರೆ. ಆದರೆ, ಸಂಸದ ಸುರೇಶ್ ಅವರು ಯೋಗೇಶ್ವರ್ ಅವರನ್ನು ಓಲೈಕೆ ಮಾಡುವ ಮಾತುಗಳನ್ನು ಆಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ.
ಸದ್ಯದ ಸನ್ನಿವೇಶದಲ್ಲಿ ಸಿ.ಪಿ.ಯೋಗೇಶ್ವರ್‌ಗೆ ವಿಧಾನ ಪರಿಷತ್ ಸದಸ್ಯತ್ವ ಹೊರತಾಗಿ ಯಾವುದೇ ಅಧಿಕಾರ ಇಲ್ಲ. ಮಂತ್ರಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಒಂದು ವೇಳೆ ಅಧಿಕಾರ ದೊರೆಯದಿದ್ದರೆ ಯೋಗೇಶ್ವರ್ ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಬಿಡುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಲೇ ಇವೆ. ಇದಕ್ಕೆ ಪುಷ್ಟಿ ನೀಡುವಂತೆ ಚನ್ನಪಟ್ಟಣಕ್ಕೆ ಯೋಗೇಶ್ವರ್ ಮಾತ್ರ ಸಮರ್ಥ ಅಭ್ಯರ್ಥಿ ಎನ್ನುವುದನ್ನು ಮನಗಂಡಿರುವ ಸಂಸದ ಡಿ.ಕೆ. ಸುರೇಶ್, ಸಿಪಿವೈಗೆ ಗಾಳ ಹಾಕುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಕೈಗೆ ಬೇಕಿದೆ ಸಿಪಿವೈ? : ರಾಜಕಾರಣದಲ್ಲಿ ಯಾರೂ ಎಲ್ಲ ಕಾಲಕ್ಕೂ ಶತ್ರುಗಳಲ್ಲ ಹಾಗೂ ಮಿತ್ರರೂ ಅಲ್ಲ ಎನ್ನುವ ಮಾತು ಜಿಲ್ಲೆಗೆ ಅನ್ವಯವಾಗುತ್ತದೆ. ವೇದಿಕೆಯಲ್ಲಿ ವಾಚಾಮಗೋಚರ ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಿಕೊಳ್ಳುವುದು ಹಾಗೂ ಚುನಾವಣೆ, ಸರ್ಕಾರ ರಚನೆ ವೇಳೆ ಒಬ್ಬರ ಕೈ ಒಬ್ಬರು ಹಿಡಿದು ಓಡಾಡಿರುವುದಕ್ಕೂ ರಾಮನಗರ ಸಾಕ್ಷಿ ಆಗಿದೆ. ಇದೀಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾರಣ ಪ್ರತಿ ಶಾಸಕ ಸ್ಥಾನವೂ ಮುಖ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಕಾರಣ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಅಗತ್ಯವೂ ಕಾಂಗ್ರೆಸ್‌ಗೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಯೋಗೇಶ್ವರ್ ಅವರನ್ನು ನಡೆಸಿಕೊಳ್ಳುವ ರೀತಿಯನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಒಂದು ವೇಳೆ ಯೋಗೇಶ್ವರ್‌ಗೆ ಬಿಜೆಪಿಯಲ್ಲಿ ಅಧಿಕಾರ ದೊರೆಯದಿದ್ದರೆ ಕೈ ತೆಕ್ಕೆಗೆ ಹಾಕಿಕೊಳ್ಳಲು ಸಹ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಕುಮಾರಸ್ವಾಮಿಗೆ ಎಚ್ಚರಿಕೆ ಗಂಟೆ? : ಸಿದ್ಧಲಿಂಗಯ್ಯ ಕಾರ‌್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯಲ್ಲಿಯೇ ರಾಜಕೀಯ ಕಡುವೈರಿ ಸಿಪಿವೈಗೆ ಮಂತ್ರಿ ಸ್ಥಾನ ಸಿಗಲಿ ಎಂದು ಸಂಸದ ಡಿ.ಕೆ.ಸುರೇಶ್ ಹಾರೈಕೆ ಮಾಡಿರುವುದು ಎಚ್‌ಡಿಕೆ ಅವರಿಗೆ ಎಚ್ಚರಿಕೆ ಗಂಟೆ ಎಂದರೆ ತಪ್ಪಾಗಲಾರದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್ ಸೋಲು ಹಾಗೂ ಎಚ್‌ಡಿಕೆ ಅವರ ಗೆಲುವಿಗೆ ಕಾಂಗ್ರೆಸ್‌ನ ಕೊಡುಗೆ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಕಡೆ ಗಳಿಗೆಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರನ್ನು ಕಣಕ್ಕೆ ಇಳಿಸುವ ಮೂಲಕ ಡಿಕೆ ಸೋದರರು ಯೋಗೇಶ್ವರ್ ಸೋಲಿಗೆ ಕಾರಣವಾದರು. ಆದರೆ ಮುಂದಿನ ಚುನಾವಣೆಯಲ್ಲಿ ಯೋಗೇಶ್ವರ್ ಅವರ ಮೇಲೆ ಸಂಸದ ಸುರೇಶ್ ಪ್ರೀತಿ ಹೀಗೆ ಮುಂದುವರಿದರೆ ಇದು ಎಚ್‌ಡಿಕೆ ಅವರಿಗೆ ಕಂಟಕವಾಗುವುದರಲ್ಲಿ ಅನುಮಾನ ಇಲ್ಲ.