

ನವದೆಹಲಿ: ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆದು ಇಂದಿಗೆ ಒಂದು ವರ್ಷವಾಗಿದೆ. ದೇಶದ ಜನರೆಲ್ಲರೂ ಹತರಾದ ಯೊಧರ ನೆನಪಿನಲ್ಲಿ ದುಃಖಿತರಾಗಿದ್ದರೆ ಸಿಪಿಐ(ಎಂ) ನ ನಾಯಕ ಮೊಹಮ್ಮದ್ ಸಲೀಮ್ ಯೋಧರಿಗೆ ಸ್ಮಾರಕ ನಿರ್ಮಿಸುವ ಅಗತ್ಯತೆ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಲೀಮ್, "ನಮ್ಮ ಅಸಮರ್ಥತೆಯನ್ನು ನೆನಪಿಸಲು ಸ್ಮಾರಕ ನಿರ್ಮಿಸಿಕೊಳ್ಳುವ ಅಗತ್ಯವಿಲ್ಲ. ಪುಲ್ವಾಮದ ದಾಳಿಯ ದಿನದಂದು 80 ಕೆ.ಜಿ.ಯ ಆರ್ಡಿಎಕ್ಸ್ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಮಿಲಿಟರಿ ವಲಯಕ್ಕೆ ಹೇಗೆ ಬಂತು ಎನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕು." ಎಂದು ಹೇಳಿದ್ದಾರೆ.
ಹತರಾದ ನಮ್ಮ ಸೈನಿಕರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಸಲೀಮ್ ಹೇಳಿದ್ದಾರೆ.
2019ರ ಫೆ.14ರಂದು 78 ವಾಹನಗಳಲ್ಲಿ 2,500ಕ್ಕೂ ಹೆಚ್ಚು ಸಿಪಿಆರ್ಎಫ್ ಯೋಧರನ್ನು ಜಮ್ಮುವಿನಿಂದ ಶ್ರೀನಗರಕ್ಕೆ ರವಾನಿಸಲಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲಾಗಿ ಬರುತ್ತಿದ್ದ ಸೇನಾ ವಾಹನಗಳಿಗೆ ಕೆಂಪು ಬಣ್ಣದ ಕಾರೊಂದು ಬಂದು ಡಿಕ್ಕಿ ಹೊಡೆದಿದ್ದು ಭಾರೀ ಸ್ಫೋಟ ಸಂಭವಿಸಿತ್ತು. ಈ ಘಟನೆಯಿಂದಾಗಿ 40ಕ್ಕೂ ಹೆಚ್ಚು ಯೋಧರು ದುರ್ಮರಣ ಹೊಂದಿದ್ದರು. (ಏಜೆನ್ಸೀಸ್)